ಬೆಂಗಳೂರು: ರಾಜ್ಯಾದ್ಯಂತ ಇನ್ನೂ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಇಂದು (ನ.10,11) ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಮಳೆಯಾಗುವ ಸಂಭವವಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ.
ಕರ್ನಾಟಕದಲ್ಲಿ ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಕೈಕೊಟ್ಟಿದ್ದು, ಹಿಂಗಾರು ರೈತನ ಕೈಹಿಡಿದೆ. ಮಳೆಯಾಗುತ್ತಿರುವುದರಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ಇನ್ನು ಮಳೆಯಾಗುತ್ತಿರುವುರಿಂದ ರಾಜ್ಯದ ಕೆಲವು ನದಿಗಳಲ್ಲಿ ಒಳಹರಿವು ಕೊಂಚ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿಲ್ಲ. ಇದರಿಂದ ಪ್ರಮುಖ ಜಲಾಶಯ ಆಲಮಟ್ಟಿಗೆ ಶೂನ್ಯ ಒಳಹರಿವು ಇದೆ