ಇಸ್ಲಾಮಾಬಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಐಪಿಎಲ್ನಿಂದಾಗಿ ಪ್ರೇರಿತಗೊಂಡ ವಿದೇಶಿ ಕ್ರಿಕೆಟ್ ಮಂಡಳಿಗಳು ತಮ್ಮ ದೇಶಗಳಲ್ಲೂ ಟಿ20 ಲೀಗ್ಗಳನ್ನ ಆಯೋಜಿಸಲು ಪ್ರಾರಂಭಿಸಿವೆ. ಆದ್ರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ (Wasim Akram) ತನ್ನ ದೇಶದ ಸೂಪರ್ ಲೀಗ್ಗಿಂತಲೂ ಭಾರತದ ಐಪಿಎಲ್ ದೊಡ್ಡದು ಎಂದು ಬಣ್ಣಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್, ಪಾಕಿಸ್ತಾನದ ಸೂಪರ್ ಲೀಗ್ (Pakistan Super League) ಗಿಂತ ಐಪಿಎಲ್ ದೊಡ್ಡದು. ನಾನು ಐಪಿಎಲ್ ಹಾಗೂ ಪಿಎಸ್ಎಲ್ನಲ್ಲಿ ಕೆಲಸ ಮಾಡಿದ್ದೇನೆ. ಎರಡನ್ನ ಹೋಲಿಸೋದಕ್ಕೇ ಸಾಧ್ಯವಿಲ್ಲ, ಏಕೆಂದರೆ ಐಪಿಎಲ್ ತುಂಬಾ ದೊಡ್ಡ ಕ್ರೀಡೆ. ಆದ್ರೆ ಪಾಕಿಸ್ತಾನದ ಸೂಪರ್ ಲೀಗ್ ಅನ್ನು ಮಿನಿ ಐಪಿಎಲ್ ಎಂದು ಕರೆಯಬಹುದು, ಪಾಕ್ಗೆ ಅದೇ ದೊಡ್ಡದು ಎಂದಿದ್ದಾರೆ.
ವಿಶ್ವದ ದುಬಾರಿ ಕ್ರೀಡೆ:
2008ರಲ್ಲಿ ಆರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ವಿಶ್ವದ ದುಬಾರಿ ಕ್ರೀಡೆ ಎಂದೇ ಖ್ಯಾತಿ ಪಡೆದುಕೊಂಡಿದೆ. ದೇಶ-ವಿದೇಶದ ಆಟಗಾರರು ಐಪಿಎಲ್ನಲ್ಲಿ ಆಡಬೇಕೆಂದು ಬಯಸುತ್ತಾರೆ. ಈ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ವಿಶ್ವಮಟ್ಟದಲ್ಲಿ ದಾಖಲೆಗಳನ್ನೂ ಮಾಡುತ್ತಿದ್ದಾರೆ. ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಗಳಿಗೆ ಸೇರಲು ಇದು ಉತ್ತಮ ವೇದಿಕೆಯೂ ಆಗಿದೆ.
ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್:
ಪ್ರತಿಷ್ಠಿತ ಐಪಿಎಲ್ಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ, ಐಪಿಎಲ್ಗಿಂತಲೂ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಸಿದ್ಧತೆ ನಡೆಯುತ್ತಿದೆ. ಈಗಾಗಲೇ 2024ರ ಐಪಿಎಲ್ ಟೂರ್ನಿಗೂ ಸಾಕಷ್ಟು ಹಣ ಹೂಡಿಕೆ ಮಾಡಿರುವುದಾಗಿ ಪ್ರಮುಖ ಮೂಲಗಳು ತಿಳಿಸಿವೆ.
2024ರ ಐಪಿಎಲ್ಗೆ ಭಾರೀ ಸಿದ್ಧತೆ:
2024ರ ಐಪಿಎಲ್ ಟೂರ್ನಿಯೂ ಮಾರ್ಚ್ ತಿಂಗಳಿನಿಂದ, ಮೇ ಅಂತ್ಯದ ವರೆಗೆ ನಡೆಯುವ ಸಾಧ್ಯತೆಗಳಿವೆ. 2024ರ ಲೋಕಸಭಾ ಚುನಾವಣೆಯ ದಿನಾಂಕವನ್ನು ನೋಡಿಕೊಂಡು ಐಪಿಎಲ್ ಟೂರ್ನಿಯ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಐಪಿಎಲ್ ಮಂಡಳಿ ತಿಳಿಸಿದೆ. ಇನ್ನೂ 2024ರ ಐಪಿಎಲ್ಗೆ ಆಸೀಸ್ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂ.ಗಳಿಗೆ ಕೋಲ್ಕತ್ತಾ ನೈಟ್ರೈಡರ್ಸ್ ತಂಡದ ಪಾಲಾಗಿದ್ದಾರೆ. ಮತ್ತೊಬ್ಬ ಆಸೀಸ್ ಆಲ್ರೌಂಡರ್ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂ.ಗೆ ಸನ್ರೈಸರ್ಸ್ ಹೈದರಾಬಾದ್ ಪಾಲಾಗಿದ್ದು, ಐಪಿಎಲ್ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.