ಹಾಸನ:- ಆನ್ಲೈನ್ ಗೇಮ್ ಗೀಳಿಗೆ ಇಡೀ ಕುಟುಂಬವೇ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀನಿವಾಸ್ ಆನ್ಲೈನ್ ಗೇಮ್ ಹುಚ್ಚಿಗೆ ಬಿದ್ದು ಇದ್ದ ಬದ್ದ ಆಸ್ತಿ ಮಾರಾಟ ಮಾಡಿ, ಮೈತುಂಬ ಸಾಲಮಾಡಿಕೊಂಡು ಕಡೆಗೆ ಸಾಲ ತೀರಿಸಲಾಗದೆ ಪತ್ನಿ ಶ್ವೇತಾ ಹಾಗೂ ಮಗಳು ನಾಗಶ್ರೀ ಜೊತೆಗೆ ಕಾಲುವೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಕಳೆದ ಶನಿವಾರದಿಂದಲೇ ಶ್ರೀನಿವಾಸ್ ಪತ್ನಿ ಮಗಳ ಜೊತೆಗೆ ಕಾಣೆಯಾಗಿದ್ದರು. ಕುಟುಂಬ ಸದಸ್ಯರ ಸಂಪರ್ಕಕ್ಕೆ ಸಿಗದಿದ್ದಾಗ ಅನುಮಾನಗೊಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಟ್ಟಿದ್ದಾರೆ.
ಕೇಸ್ ದಾಖಲಿಸಿಕೊಂಡು ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಸಂಜೆ ನುಗ್ಗೆಹಳ್ಳೀ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ಲಾಪುರ ಹೇಮಾವತಿ ನಾಲೆಯಲ್ಲಿ ಗಂಡ-ಹೆಂಡತಿ ಶವ ಪತ್ತೆಯಾಗಿದ್ದು, ಇಂದು ಪುತ್ರಿ ಶವ ಕೂಡ ಪತ್ತೆಯಾಗಿದೆ.
ಎರಡು ಸ್ವಂತದ ಕಾರ್ ಇಟ್ಟುಕೊಂಡು ಚಾಲಕನಾಗಿ ಚೆನ್ನಾಗಿಯೇ ಜೀವನ ಸಾಗಿಸುತ್ತಾ ಬೆಂಗಳೂರಿನಲ್ಲಿದ್ದ ಶ್ರೀನಿವಾಸ್ಗೆ ಶಿಕ್ಷಕಿಯಾಗಿದ್ದ ಪತ್ನಿ ಕೂಡ ದುಡಿಮೆಗೆ ಸಾಥ್ ಕೊಟ್ಟಿದ್ದರು. ವಾಸಕ್ಕೆ ಚನ್ನರಾಯಪಟ್ಟಣದಲ್ಲಿ ಒಂದು ಸ್ವಂತ ಮನೆ ಕೂಡ ಇತ್ತು. ಆದ್ರೆ, ಮೊಬೈಲ್ ಜಾಹೀರಾತು ನೋಡಿ ಆನ್ಲೈನ್ ರಮ್ಮಿ ಗೇಮ್ ಗೀಳಿಗೆ ಬಿದ್ದ ಶ್ರೀನಿವಾಸ್, ಕಾರು ಮತ್ತು ಮನೆ ಎಲ್ಲವನ್ನು ಮಾರಿಕೊಂಡು ಬೀದಿಪಾಲಾಗಿದ್ದ, ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿ ಆಟ ಆಡುವುದಕ್ಕೆ ಶುರುಮಾಡಿದ್ದ. ಕೆಲಸಬಿಟ್ಟು ಆನ್ಲೈನ್ ಗೇಮ್ಗೆ ಸೀಮಿತವಾಗಿ ಸಾಲ ಹೆಚ್ಚಾದಾಗ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗಿದ್ದಾರೆ.