ಮಂಡ್ಯ :- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಲ್ಪ ದಾರಿತಪ್ಪಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್ ( ಮಹಿಳಾ ಮೊರ್ಚಾ ) ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ನೇತೃತ್ವದಲ್ಲಿ ಸೋಮವಾರ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕುಮಾರಸ್ವಾಮಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
![Demo](https://ainlivenews.com/wp-content/uploads/2023/12/spoorthi-1.jpg)
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಂಜನಾ ಶ್ರೀಕಾಂತ್ ರಾಜ್ಯದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡಬೇಕೆಂದು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಇಂತಹ ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲಾರದೆ ಕುಮಾರಸ್ವಾಮಿ ಅವರು ಅವಹೇಳನವಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಚುನಾವಣೆಯಲ್ಲಿ ಹೆಣ್ಣು ಮಕ್ಕಳ ಸ್ವಾಭಿಮಾನದ ಪ್ರಶ್ನೆ ಎದ್ದಿದೆ. ಹೆಣ್ಣು ಮಕ್ಕಳು ಅಭಿವೃದ್ದಿ ಆಗುವುದು ಕುಮಾರಸ್ವಾಮಿ ಅವರಿಗೆ ಬೇಕಿಲ್ಲವೇ. ಕುಮಾರಸ್ವಾಮಿ ಅವರಿಗೆ ಇದು ಶೋಭೆ ಅಲ್ಲ. ಈ ಹಿಂದೆ ಸುಮಲತಾ ಅಂಬರೀಷ್ ಅವರ ಬಗ್ಗೆ ಪ್ರಶ್ನೆ ಮಾಡಿದ ಬಡ ಮಹಿಳೆ ಬಗ್ಗೆ ಹೀಗೆಯೇ ಮಾತನಾಡಿದ್ದರು. ಮಂಡ್ಯದಲ್ಲಿ ಓಟು ಕೇಳಲು ಬರುತ್ತಿರುವ ಕುಮಾರಸ್ವಾಮಿ ಅವರಿಗೆ ಮಂಡ್ಯದ ಸ್ವಾಭಿಮಾನಿ ಮಹಿಳೆಯರು ಉತ್ತರ ಕೊಡಲಿದ್ದಾರೆ ಎಂದರು.
ಕಳೆದ ಬಾರಿ ಸುಮಲತಾ ಬಗ್ಗೆ ಮಾತನಾಡಿ ಪುತ್ರನನ್ನು ಸೋಲಿಸಿದ್ದಾರೆ. ಈ ಬಾರಿ ಕುಮಾರಸ್ವಾಮಿ ಅವರನ್ನು ಸ್ವಾಭಿಮಾನಿ ಮಹಿಳೆಯರು ಸೋಲಿಸಿ ಮನೆಗೆ ಕಳುಹಿಸಬೇಕು. ಇಂತವರು ಜನಪ್ರತಿನಿಧಿಯಾದರೆ ಮಹಿಳೆಯರಿಗೆ ರಕ್ಷಣೆ ಸಿಗುತ್ತದೆಯೇ ಎಂಬುದನ್ನು ಹೆಣ್ಣು ಮಕ್ಕಳು ಅರ್ಥಮಾಡಿಕೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು, ಮಹಿಳಾ ಮುಖಂಡರಾದ ಲಕ್ಷ್ಮಮ್ಮ, ಅಂಜಲಿ, ಭಾಗ್ಯಮ್ಮ, ಜ್ಯೋತಿ, ಶಾಂತಮ್ಮ, ತಾಯಮ್ಮ, ಸರೋಜಮ್ಮ, ಸುನೀತ, ನಿಂಗಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ
![](https://ainlivenews.com/wp-content/uploads/2024/01/Ad-Banner-copy-scaled.jpg)