ಬೆಂಗಳೂರು:– ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಪೋಸ್ಟರ್ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಪೋಸ್ಟರ್ ಪಾಲಿಟಿಕ್ಸ್ ಮೂಲಕ ಅಪಪ್ರಚಾರ ಮಾಡಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ. ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಎ.ಮಂಜುನಾಥ್ ತಿಳಿಸಿದರು
ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ಸಮಯದಲ್ಲಿ ಪೇ ಸಿಎಂ ಪೋಸ್ಟರ್ಗಳನ್ನು ರಾತ್ರೋ ರಾತ್ರಿ ಅಂಟಿಸಿದರು. ಈಗ ಜನಪರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಅಂಟಿಸಿದರೆ ಮೇಲುಗೈ ಸಾಧಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ನಾವು ಕಾಂಗ್ರೆಸ್ನವರ ಪೋಸ್ಟರ್ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ. ಅವರು ಒಂದು ಮಾಡಿದರೆ ಹತ್ತು ಮಾಡುವ ಶಕ್ತಿ ನಮಗೂ ಕೂಡ ಇದೆ. ಇದು ಯಾವುದು ಕೂಡ ರಾಜಕಾರಣದಲ್ಲಿ ಶಾಶ್ವತ ಅಲ್ಲ ಎಂದು ಹೇಳಿದರು.
ನಾವು ಗೃಹ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ಪೊಲೀಸ್ ಮಹಾನಿರ್ದೇಶಕರಿಗೂ ಸಹ ಮನವಿ ಮಾಡುತ್ತೇವೆ. ಇದಕ್ಕೆಲ್ಲ ಕಡಿವಾಣ ಹಾಕುವ ಕೆಲಸ ಮಾಡಬೇಕು. ವಿದ್ಯುತ್ ವಿಚಾರವಾಗಿ ಕುಮಾರಸ್ವಾಮಿಯವರ ವಿರುದ್ದ ಪೋಸ್ಟರ್ ಅಂಟಿಸಿದ್ದಾಗ ಗೃಹ ಇಲಾಖೆ ಏನು ಮಾಡುತ್ತಿತ್ತು? ಮತ್ತೆ ಪೋಸ್ಟರ್ ಅಂಟಿಸಿದ್ದಾರೆ. ಹೀಗೆ ಮುಂದುವರೆದರೆ ಹಾದಿಬೀದಿಯಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುವ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ಅಂತಹ ಪರಿಸ್ಥಿತಿ ಸೃಷ್ಟಿಯಾದರೆ ಸರಕಾರ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಆಗಬೇಕಾಗುತ್ತದೆ ಎಂದರು.