ಬೆಂಗಳೂರು: ದೇವೇಗೌಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಹೋಗಲೇ ಬೇಕಲ್ಲವೇ? ನಮ್ಮ ವಿರುದ್ಧ ದೂರು ನೀಡಿ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾನು ಎಲ್ಲದಕ್ಕೂ ಸಿದ್ಧವಿದ್ದೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ದಿನಾ ಸಾಯುವವರಿಗೆ ಅಳುವವರಾರು?
ಸಿಎಂ ಹಾಗೂ ಡಿಸಿಎಂ ಅವರನ್ನು ಚಕ್ರವ್ಯೂಹಕ್ಕೆ ಸಿಲುಕಿಸಿದರೆ ಸರ್ಕಾರ ಪತನ ಸುಲಭ ಎಂಬುದು ಅವರ ಲೆಕ್ಕಾಚಾರವೇ ಎಂದು ಕೇಳಿದಾಗ, “ನಮ್ಮ ಹಳ್ಳಿ ಕಡೆ ಹೇಳುವಂತೆ ದಿನಾ ಸಾಯುವವರಿಗೆ ಅಳುವವರಾರು? ದಿನಾ ಬೆಳಗ್ಗೆ ಇವರ ಗೋಳು ಇದ್ದದ್ದೆ. ಮುಂಚೆಯಿಂದಲೂ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಈಗಲೂ ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಜನಪರ ಉದ್ದೇಶವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಶುಭಗಳಿಗೆ ನೋಡಿಕೊಂಡು ದಾಖಲೆ ಬಿಡುಗಡೆ:
ಕುಮಾರಸ್ವಾಮಿ ಸಹೋದರನ ಆಶ್ತಿ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿಯೂ ಮಾಡಲೇಬೇಕು. ಅದಕ್ಕೆ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರ ನೋಡಿ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಂಚೆ ನಮ್ಮ ಬಗ್ಗೆ ಮಾಡುತ್ತಿರುವ ಆರೋಪಗಳ ಬಗ್ಗೆ ದಾಖಲೆ ಬಿಚ್ಚಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.
ಸದನದಲ್ಲಿ ಚರ್ಚೆ ಮಾಡಲು ನೀವು ಆಹ್ವಾನ ಕೊಟ್ಟರೂ ಅವರು ಬರಲಿಲ್ಲ ಎಂದು ಕೇಳಿದಾಗ, “ಈ ವಿಚಾರವಾಗಿ ಚರ್ಚೆ ಮಾಡಲು ಎರಡು ಬಾರಿ ಅಧಿವೇಶನಕ್ಕೆ ಬನ್ನಿ ಎಂದು ಆಹ್ವಾನ ನೀಡಿದೆ. ಅವರು ಬರಲಿಲ್ಲ. ಈಗ ಅವರ ಅಣ್ಣನ ಬಳಿ ದಾಖಲೆ ಕೊಟ್ಟು ಕಳಿಸಿ ಚರ್ಚೆ ಮಾಡಲಿ. ನಾನು ಸುಮ್ಮನೆ ಮಾಧ್ಯಮಗಳ ಮುಂದೆ ಮಾತನಾಡಿದರೆ ಅದು ಒಂದೆರಡು ದಿನ ಸುದ್ದಿಯಾಗಿ ಮರೆಯಾಗುತ್ತದೆ. ಆದರೆ, ಸದನದಲ್ಲಿ ಚರ್ಚೆಯಾದರೆ ಅದು ದಾಖಲೆಯಾಗಿ ಉಳಿದು ಮುಂದಿನ ತಲೆಮಾರಿನವರು ತಿಳಿಯಬಹುದು. ನನಗೆ ಈಗ ಸಮಯವಿಲ್ಲ. ಅವರ ಎಲ್ಲಾ ದಾಖಲೆ ತೆಗೆಸುತ್ತೇನೆ” ಎಂದು ತಿಳಿಸಿದರು.