ನವದೆಹಲಿ: ಹಾವೇರಿಯಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಅಪಘಾತ ಈಗ ಗೊತ್ತಾಯಿತು. ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ..?: ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಟಿ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಸುಭದ್ರಾಬಾಯಿ (65), ಮಾನಸ (24), ಮಂಜುಳಾ ಬಾಯಿ (62), ಚಾಲಕ ಆದರ್ಶ (23), ಆರ್ಯ, ವಿಶಾಲಾಕ್ಷಿ (40), ರೂಪಾಬಾಯಿ (40), ನಂದನ್, ಅಂಜಲಿ, ನಾಗೇಶ್ವರ ರಾವ್, ಅರುಣ್ ಕುಮಾರ್ ಮತ್ತು ಭಾಗ್ಯಲಕ್ಷ್ಮಿ ಮೃತಪಟ್ಟಿದ್ದಾರೆ. ಅನ್ನಪೂರ್ಣ, ಅರ್ಪಿತಾ, ಪರಶುರಾಮ್ ಮತ್ತು ಗೌತಮ್ ಗಾಯಗೊಂಡಿದ್ದಾರೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂದು ಸ್ವಗ್ರಾಮಕ್ಕೆ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದೆ. ಪರಿಣಾಮ ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ಟಿಟಿ ವಾಹನ ಅತಿವೇಗದಲ್ಲಿ ಇದ್ದ ಕಾರಣ ಈ ದುರಂತ ಸಂಭವಿಸಿದೆ ಎಂದು ಜಿಲ್ಲೆಯ ಎಸ್ಪಿ ತಿಳಿಸಿದ್ದಾರೆ.