ಪ್ರಾಪರ್ಟಿ ಡೀಡ್, ಬ್ಯಾಂಕ್ ಠೇವಣಿಯ ಪತ್ರ ಇತ್ಯಾದಿ ದಾಖಲೆಗಳು ಕಳೆದು ಹೋದರೆ ಪರಿಸ್ಥಿತಿ ದುಃಸ್ವಪ್ನವಾಗುತ್ತದೆ. ಇದು ತುಂಬ ಒತ್ತಡ ಮತ್ತು ಹಣಕಾಸು ನಷ್ಟವನ್ನೂ ಉಂಟು ಮಾಡಬಹುದು. ಮೂಲ ಪ್ರತಿಯಾಗಿದ್ದರೆ ಅದು ದುರ್ಬಳಕೆಯಾಗುವ ಆತಂಕ ಕೂಡ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಾಪರ್ಟಿ ಅಥವಾ ಷೇರಿಗೆ ಸಂಬಂಧಿಸಿದ ದಾಖಲೆಯಾಗಿದ್ದರೆ ಸಮಸ್ಯೆ ಹೆಚ್ಚು. ಹಾಗಾದರೆ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ? ಇಲ್ಲಿದೆ ಟಿಪ್ಸ್.
ಆಸ್ತಿ ಕುರಿತ ದಾಖಲೆಗಳು
ಪ್ರಾಪರ್ಟಿಗೆ ಸಂಬಂಧಪಟ್ಟ ದಾಖಲೆಗಳು ಕಳೆದು ಹೋದರೆ ಮೊದಲ ಹೆಜ್ಜೆಯಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕು. ನಂತರ ಎರಡು ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ಸೂಚನೆ ಪ್ರಕಟಿಸಬೇಕು. ಇದು 3000-30,000 ರೂ. ತನಕ ವೆಚ್ಚವಾಗಬಹುದು. ದೂರಿನ ಪ್ರತಿಯನ್ನು ಮತ್ತು ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ಇಟ್ಟುಕೊಳ್ಳಿ.
ಇದು ನಿಮ್ಮ ದಾಖಲೆಗಳು ಕಳೆದುಹೋಗಿರುವುದಕ್ಕೆ ಆಧಾರವಾಗುತ್ತದೆ. ಆಸ್ತಿಯ ಮಾಲಿಕತ್ವದ ದಾಖಲೆಯ ನಕಲಿ ಪ್ರತಿಯನ್ನು ಪಡೆಯಲು ಅಸಲಿ ಸೇಲ್ ಡೀಡ್ನ ಪ್ರಾಮಾಣೀಕೃತ ಪ್ರತಿ ಪಡೆಯಬೇಕು. ಇದನ್ನು ದಾಖಲೆಗಳನ್ನು ನೋಂದಣಿ ಮಾಡಿಸಿದ್ದ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಪಡೆದುಕೊಳ್ಳಬಹುದು. ಇದು 500 ರೂ. ಒಳಗೆ ಆಗುತ್ತದೆ.
ನಿಮ್ಮ ಬ್ಯಾಂಕ್ ನಿಮ್ಮ ಪ್ರಾಪರ್ಟಿ ದಾಖಲೆಗಳನ್ನು ಕಳೆದುಕೊಂಡರೆ ತಕ್ಷಣ ಅದು ನಿಮಗೆ ತಿಳಿಸಬೇಕು. ಆಗಲೂ ನೀವು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪತ್ರಿಕೆಯಲ್ಲಿ ಸಾರ್ವಜನಿಕ ಸೂಚನೆ ಪ್ರಕಟಿಸಬೇಕು. ಆದರೆ ಇದರೆ ವೆಚ್ಚಗಳನ್ನು ಬ್ಯಾಂಕ್ ಭರಿಸುತ್ತದೆ.
ಷೇರು ದಾಖಲೆಗಳು
ಇಲ್ಲಿ ಕೂಡ ಪೊಲೀಸರಿಗೆ ದೂರು ಸಲ್ಲಿಸಬೇಕು ಮತ್ತು 2 ಪತ್ರಿಕೆಯಲ್ಲಿ ಪ್ರಕಟಣೆ ಪ್ರಕಟಿಸಬೇಕು. ನಂತರ ಕೋರ್ಟ್ ಮೂಲಕ ತಡೆಯಾಜ್ಞೆ ತರಬೇಕು. ಇದರಿಂದ ಕಳೆದುಹೋದ ಷೇರು ದಾಖಲೆಗಳನ್ನು ಬೇರೆ ಯಾರಾದರೂ ದುರ್ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಕಂಪನಿಯು ನಿಮಗೆ ನಕಲಿ ದಾಖಲೆ ಸಲ್ಲಿಸಬೇಕು ಎಂದೂ ಕೋರ್ಟ್ ಆದೇಶಿಸುತ್ತದೆ. ನಕಲಿ ದಾಖಲೆಗೆ ಅರ್ಜಿ ಸಲ್ಲಿಸುವ ವೇಳೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನ ಪ್ರತಿ ಕೊಡಬೇಕು. ಆರು ವಾರದೊಳಗೆ ಕಂಪನಿ ನಕಲಿ ಪ್ರತಿ ಕೊಡುತ್ತದೆ. ಇದು 200-500 ರೂ. ವೆಚ್ಚದಲ್ಲಿ ದೊರೆಯುತ್ತದೆ.
ಬ್ಯಾಂಕ್ ಠೇವಣಿ
ಬ್ಯಾಂಕ್ ಠೇವಣಿ ದಾಖಲೆಗಳ ನಕಲಿ ಪ್ರತಿ ಕಳೆದುಕೊಂಡಾಗ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ಠೇವಣಿಯ ಮೊತ್ತ, ಕಳೆದು ಹೋದ ಬಗೆಯನ್ನು ವಿವರಿಸಬೇಕು. ನಿಮ್ಮ ಹೇಳಿಕೆ ತೃಪ್ತಿಕರವಾಗಿದ್ದಲ್ಲಿ ಬ್ಯಾಂಕ್ ನಕಲಿ ಪ್ರತಿ ಕೊಡುತ್ತದೆ.