ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 15ನೇ ಕಂತಿನ ಹಣ ನವೆಂಬರ್ 15ರಂದು ಬಿಡುಗಡೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು.
ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಬಹುತೇಕ ಮಂದಿಯ ಖಾತೆಗೆ ಹಣ ಬಂದಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳಿಂದ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.
ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಅದಕ್ಕೆ ಕಾರಣಗಳಿವು…
• ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರಬಹುದು.
• ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು.
• ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು
ನೀವು ಪಿಎಂ ಕಿಸಾನ್ ಸ್ಕೀಮ್ನ ಅಧಿಕೃತ ಪೋರ್ಟಲ್ಗೆ (ಲಿಂಕ್ ಇಲ್ಲಿದೆ: https://pmkisan.gov.in/) ಹೋದರೆ ಮುಖ್ಯಪುಟದಲ್ಲೇ ಆರಂಭದಲ್ಲಿ ಒಂದು ಪಾಪ್ ಅಪ್ ಬರುತ್ತದೆ. ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆಯಪ್ ಡೌನ್ಲೋಡ್ ಮಾಡಲು ಕ್ಯುಆರ್ ಕೋಡ್ಗಳು ಕಾಣುತ್ತವೆ. ನಿಮಗೆ ಬೇಕಾದರೆ ಅದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು.