ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲದ ಟೆಸ್ಟ್ ಕ್ರಿಕೆಟ್ ನಲ್ಲಿ ತಮಗೆ ಸವಾಲಾಗಿದ್ದ ಕ್ರಿಕೆಟಿಗರನ್ನು ಆಸ್ಟ್ರೇಲಿಯಾದ ಖ್ಯಾತ ಆಫ್ ಸ್ಪಿನ್ನರ್ ನಾಥನ್ ಲಯಾನ್ ಹೆಸರಿಸಿದ್ದಾರೆ.
ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಮ್ಮ ದಶಕಕ್ಕೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ತಮಗೆ ಸವಾಲಾಗಿದ್ದ ಕ್ರಿಕೆಟಿಗರ ರೂಪದಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿಯ ಹೆಸರನ್ನು ಸೂಚಿಸಿದ್ದು, ಅವರ ವಿಕೆಟ್ ಪಡೆಯಲು ರಣತಂತ್ರಗಳನ್ನು ರೂಪಿಸುತ್ತಿದ್ದೆ ಎಂದು ಹೇಳಿದ್ದಾರೆ.
ನನ್ನ ಟೆಸ್ಟ್ ಜೀವನದಲ್ಲಿ ನನಗೆ ಸವಾಲಾಗಿದ್ದ ಬ್ಯಾಟರ್ಸ್ ಬಗ್ಗೆ ಕೇಳುವುದು ನಿಜಕ್ಕೂ ಅದು ತುಂಬಾ ಕಠಿಣ ಪ್ರಶ್ನೆ ಆಗಿದೆ. ನನ್ನ ಕ್ರಿಕೆಟ್ ಜೀವನದಲ್ಲಿ ನಾನು ಹಲವರು ಕ್ರಿಕೆಟ್ ದಿಗ್ಗಜರ ಎದುರು ಆಡಿದ್ದೇನೆ. ನಾನು ನಿಮಗೆ ಮೂವರ ಹೆಸರನ್ನು ನೀಡುತ್ತೇನೆ. ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರೇ ನನಗೆ ಸವಾಲು ನೀಡಿದ ಆಟಗಾರರು,” ಎಂದು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲಯಾನ್ ಟೀಮ್ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ವಿರಾಟ್ ವಿರುದ್ಧ ಆಡಿರುವ 27 ಟೆಸ್ಟ್ ಪಂದ್ಯಗಳಲ್ಲಿ ಲಯಾನ್ 7 ಬಾರಿ ಕೊಹ್ಲಿ ವಿಕೆಟ್ ಪಡೆದಿದ್ದಾರೆ. 2011 ರಿಂದ 2013ರವರೆಗೂ ಸಚಿನ್ ತೆಂಡೂಲ್ಕರ್ ವಿರುದ್ಧ 6 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಆಫ್ ಸ್ಪಿನ್ನರ್, 4 ಬಾರಿ ವಿಕೆಟ್ ಪಡೆದಿದ್ದರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿಡಿ ವಿಲಿಯರ್ಸ್ ವಿರುದ್ಧ 12 ಪಂದ್ಯಗಳಲ್ಲಿ ಆಡಿದರೂ 2 ಬಾರಿ ಮಾತ್ರ ಅವರ ವಿಕೆಟ್ ಪಡೆಯಲು ಸಫಲರಾಗಿದ್ದಾರೆ. ಟೀಮ್ ಇಂಡಿಯಾದ ವಿರುದ್ಧ ಉತ್ತಮ ದಾಖಲೆ ಹೊಂದಿರುವ ನಾಥನ್ ಲಯಾನ್ 27 ಟೆಸ್ಟ್ ಪಂದ್ಯಗಳಿಂದ 121 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 50ಕ್ಕೆ8 ವಿಕೆಟ್ ಪಡೆದಿರುವುದು ಸರ್ವಶ್ರೇಷ್ಠ ಪ್ರದರ್ಶನವಾಗಿದೆ.