‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತ ಹನುಮಂತ ಅವರು 50 ಲಕ್ಷ ರೂಪಾಯಿ ಹಾಗೂ ಕಪ್ ಗೆದ್ದಿದ್ದಾರೆ. ಇನ್ಮುಂದೆ ಹನುಮಂತ ಕುರಿ ಕಾಯಲ್ಲ. ಆತನ ಲೈಫ್ ಬದಲಾಗಲಿದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಊರು ತಲುಪಿದ ಹನುಮಂತ ತಮ್ಮ ಕಾಯಕ ಮುಂದುವರಿಸುವ ಘೋಷಣೆ ಮಾಡಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದ ಹನುಮಂತನನ್ನು ಹುಟ್ಟೂರಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಹಾವೇರಿಯ ಚಿಲ್ಲೂರಬಡ್ನಿಗೆ ತಲುಪಿದ ಹನುಮಂತನನ್ನು ತೆರೆದ ವಾಹದ ಮೂಲಕ 10 ಕಿಮೀ ಮೆರವಣಿಗೆ ಮಾಡಲಾಯಿತು.
ಬಿಗ್ ಬಾಸ್ ಗೆದ್ದು ಹುಟ್ಟೂರಿಗೆ ಮರಳಿರುವ ಹನುಮಂತ ಕುರಿ ಕಾಯುವ ಕೆಲಸ ಮುಂದುವರಿಸೋದಾಗಿ ಹೇಳಿದ್ದಾರೆ. ಸದ್ಯ ಹನುಮಂತ ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಇದ್ದಾರೆ. ಇದಕ್ಕಾಗಿ ಅವರು ಆಗಾಗ ಬೆಂಗಳೂರಿಗೆ ಬರಬೇಕಾಗುತ್ತದೆ. ಇದರ ಜೊತೆಗೆ ಹಲವು ಕಾರ್ಯಕ್ರಮಗಳಿಗೆ ಅವರಿಗೆ ಆಹ್ವಾನ ಬರುತ್ತದೆ. ಇವುಗಳ ಮಧ್ಯೆ ಕುರಿ ಕಾಯುವ ಕೆಲಸವನ್ನು ಮುಂದುವರೆಸಲಿದ್ದಾರೆ.
‘ನಾನು ಕುರಿ ಕಾಯೋದನ್ನು ಮುಂದುವರಿಸುತ್ತೇನೆ. ಸದ್ಯ ನಮ್ಮ ಅಣ್ಣ ಇದ್ದಾರೆ. ನನಗೆ ಅದು ಇದು ಕಾರ್ಯಕ್ರಮವೇ ಆಗಿ ಬಿಡುತ್ತದೆ. ಸಮಯ ಸಿಕ್ಕಾಗ ನಾನು ಕುರಿ ಕಾಯುತ್ತೇನೆ’ ಎಂದು ಹನುಮಂತ ಅವರು ಹೇಳಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇಷ್ಟು ದೊಡ್ಡ ಹಂತಕ್ಕೆ ಬೆಳೆದ ಬಳಿಕವೂ ಅವರು ತಮ್ಮ ಕಾಯಕ ಮರೆತಿಲ್ಲ ಎಂದು ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ.