ಹನುಮ ಜಯಂತಿ ಅಂಗವಾಗಿ ನಗರದಲ್ಲಿ ಶ್ರೀ ಹನುಮ ಜಯಂತ್ಯುತ್ಸವ ಸಮಿತಿವತಿಯಿಂದ ಶ್ರೀ ಆಂಜನೇಯಸ್ವಾಮಿಯ ಬೃಹತ್ ಮೂರ್ತಿಯ ಮೆರವಣಿಗೆ ಸಾವಿರಾರು ಭಕ್ತರ ಹಾಗೂ ವಿವಿಧ ಸಾಂಸ್ಕೃತಿ ಕಲಾತಂಡಗಳೊಂದಿಗೆ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ವಿಜೃಂಭಣೆಯಿಂದ ಜರುಗಿತು.ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಹನುಮಂತನ ಉತ್ಸವ ಮೂರ್ತಿಗೆ ಅರಳುಕೋಟೆ ಆಂಜನೇಯಸ್ವಾಮಿ ದೇಗುಲದ ಅರ್ಚಕ ಶ್ರೀನಿಧಿ, ರಾಮಕೃಷ್ಣ ಭಾರಧ್ವಜ್ ಹಾಗೂ ಶ್ರೀ ಹನುಮ ಜಯಂತ್ಯುತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಅಲಂಕೃತ ವಾಹನಗಳಲ್ಲಿ ನಗರದ ಹಳೇ ಬಸ್ ನಿಲ್ದಾಣದಿಂದ ಹೊರಟ ಹನುಮ ಹಾಗೂ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ಚಿಕ್ಕ ಅಂಗಡಿಬೀದಿ, ಸಂತೇರಮಹಳ್ಳಿ ವೃತ್ತ, ಡೀವಿಯೇಷನ್ ರಸ್ತೆ ಮೂಲಕ ಗುಂಡ್ಲುಪೇಟೆ ವೃತ್ತ ತಲುಪಿ ದೊಡ್ಡಂಗಂಡಿ ಬೀದಿಯಲ್ಲಿ ತೆರಳಿ ಬಳಿಕ ವೀರಭದ್ರೇಶ್ವರಸ್ವಾಮಿ ದೇಗುಲದ ಮೂಲಕ ಹಳೆ ಬಸ್ ನಿಲ್ದಾಣ ತಲುಪಿ ಮೆರವಣಿಗೆ ಶ್ರೀ ಅಭಯ ಆಂಜನೇಯಸ್ವಾಮಿ ದೇಗುಲದ ಎದುರು ಕೊನೆಗೊಂಡಿತು.
ಮೆರವಣಿಗೆಯಲ್ಲಿ ವೀರಗಾಸಿ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾವಿರಕ್ಕೂ ಹೆಚ್ಚು ಜನರು ಜೈ ಶ್ರೀರಾಮ್, ಹನುಮಾನ್ ಕೀ ಜೈ ಎಂಬಿತ್ಯಾದಿ ಘೋಷಣೆ ಮೊಳಗಿಸಿದರು. ಯುವಕರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಹನುಮಂತನ ವೇಷಧರಿಸಿ ಗದೆಯನ್ನು ಹೆಗಲ ಮೇಲೆ ಇರಿಸಿ ಉತ್ಸವ ಮೂರ್ತಿ ಎದುರು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ದೃಶ್ಯ ನೋಡುಗರನ್ನು ಆಕರ್ಷಿಸಿತು. ಅಲ್ಲದೆ ಜನರು ಆ ಹನುಮನ ವೇಷಧಾರಿಯ ಜೊತೆ ನಿಂತು ಸೆಲ್ಪಿ ಹಾಗೂ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.
ಹನುಮನ ಮೂರ್ತಿ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎನ್ನುವ ಮುನ್ನೆಚ್ಚರಿಕೆ ಕ್ರಮವಹಿಸಿ ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಗತ್ಯ ಬಂದೋಬಸ್ತ್ ಮಾಡಲಾಗಿತ್ತು. ಒಟ್ಟಾರೆ ಮೆರವಣಿಗೆ ನೂರಾರು ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ಸಾಗಿತು. ಈ ಸಂದರ್ಭದಲ್ಲಿ ಶ್ರೀ ಹನುಮ ಜಯಂತ್ಯುತ್ಸವ ಸಮಿತಿಯ ಶಿವು ವಿರಾಟ್, ಮಧು, ಪ್ರವೀಣ್, ಮಂಜು ಹುಲ್ಲೇಪುರ, ಪ್ರಮೋದ್, ಪೃಥ್ವಿ, ಅರುಣ್, ಮುಖಂಡರಾದ ಜಯಸುಂದರ್ ಸೇರಿದಂತೆ ಇತರರು ಇದ್ದರು.