ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸೈಬರ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತದ ಪ್ರಮುಖ ಆರೋಗ್ಯ ವಿಮಾ ಸಂಸ್ಥೆ ಸ್ಟಾರ್ ಹೆಲ್ತ್ ನಲ್ಲಿ ಕೋಟ್ಯಂತರ ಪ್ರಮಾಣದ ಡೇಟಾ ಕಳವಾಗಿದೆ ಎಂದು ವರದಿಯಾಗಿದೆ.
ಕೋಟ್ಯಂತರ ಗ್ರಾಹಕರ ಸೂಕ್ಷ್ಮ, ವೈಯಕ್ತಿಕ ಹಾಗೂ ವಿಮೆಗೆ ಸಂಬಂಧಿಸಿದ ವಿವರಗಳನ್ನು ಕಳುವು ಮಾಡಲಾಗಿದೆ. ಕದ್ದ ಡೇಟಾಗಳು ಆನ್ಲೈನ್ನಲ್ಲಿ ಮಾರಾಟವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಬಗ್ಗೆ ಖುದ್ದು ಹ್ಯಾಕರ್ (Hacker) ಹೇಳಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ.
ನವರಾತ್ರಿ 9ನೇ ದಿನ: “ಸಿದ್ಧಿದಾತ್ರಿ ದೇವಿ”ಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು
ತಾನು 3.1 ಕೋಟಿಗಿಂತಲೂ ಹೆಚ್ಚು ಗ್ರಾಹಕರಿಗೆ ಸಂಬಂಧಿಸಿದ 7.24TB ಡೇಟಾವನ್ನು (7240 GB) ಹ್ಯಾಕ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಳವು ಮಾಡಿದ ಈ ಡೇಟಾವನ್ನು 1.50 ಲಕ್ಷ ಡಾಲರ್ಗೆ (1.26 ಕೋಟಿ ರೂ.) ಮಾರಾಟ ಮಾಡಲು ಡೇಟಾಗಳನ್ನ ಪಟ್ಟಿ ಮಾಡಲಿದ್ದೇನೆ. ಹೆಚ್ಚುವರಿಯಾಗಿ ಹೊಂದಿರುವ 1 ಲಕ್ಷ ಗ್ರಾಹಕರ ಸಣ್ಣ ಡೇಟಾ ಸೆಟ್ಗಳನ್ನು ಪ್ರತಿ ತಲಾ 10 ಸಾವಿರ ಡಾಲರ್ಗೆ (8.40 ಲಕ್ಷ ರೂ.) ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂಬುದಾಗಿ ಹೇಳಿದ್ದಾನೆ.
ಈ ಡೇಟಾ ಉಲ್ಲಂಘನೆಯು ದೇಶದಲ್ಲಿ ದತ್ತಾಂಶ ರಕ್ಷಣೆ ಮತ್ತು ಭದ್ರತೆ ಬಗ್ಗೆ ಗಮನಾರ್ಹ ಕಾಳಜಿಯನ್ನು ಹುಟ್ಟುಹಾಕಿದೆ. ಬಳಕೆದಾರರು ಕೂಡಲೇ ತಮ್ಮ ಪಾಸ್ವರ್ಡ್ಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳುವಂತೆ ಸೈಬರ್ ತಜ್ಞರು ಸೂಚಿಸಿದ್ದಾರೆ.
ಏನೇನು ಡೇಟಾ ಕಳವು?
ಸ್ಟಾರ್ ಹೆಲ್ತ್ ವಿಮಾ ಸಂಸ್ಥೆಯಿಂದ ಕದ್ದ ಡೇಟಾಗಳಲ್ಲಿ ಗ್ರಾಹಕರ ಹೆಸರು, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸಗಳು, ಜನ್ಮದಿನಾಂಕ, ಗೌಪ್ಯ ವೈದ್ಯಕೀಯ ದಾಖಲೆಗಳು, ವಸತಿ ವಿಳಾಸಗಳು, ಬ್ಯಾಂಕ್ ಸ್ಥಿತಿ ವಿವರ, ಆರೋಗ್ಯ ಕಾರ್ಡ್ ಸಂಖ್ಯೆಗಳು ಸೇರಿ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ.
ಸ್ಟಾರ್ ಹೆಲ್ತ್ ವಿಮಾ ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) ಅಮರ್ಜೀತ್ ಖನುಜಾ ಅವರೇ ಮಾಹಿತಿಯನ್ನು ನೇರವಾಗಿ ನನಗೆ ಮಾರಾಟ ಮಾಡುವ ಮೂಲಕ ಡೇಟಾ ಸೋರಿಕೆಯ ಪಾಲುದಾರರಾಗಿದ್ದಾರೆ. 3.1 ಕೋಟಿ ಗ್ರಾಹಕರ ಡೇಟಾವನ್ನು 43,000 ಯುಎಸ್ ಡಾಲರ್ಗೆ (36.14 ಲಕ್ಷ ರೂ.)ಗೆ ಮಾರಾಟ ಮಾಡಿದ್ದಾರೆ ಎಂದು ಖುದ್ದು ಹ್ಯಾಕರ್ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.