ಗುಜರಾತ್ ತಂಡವು ಗೆಲ್ಲುವ ಪಂದ್ಯ ಕೈಚೆಲ್ಲಿದ್ದು, ಪಂಜಾಬ್ ಗೆ 3 ವಿಕೆಟ್ ರೋಚಕ ಗೆಲುವು ಸಿಕ್ಕಿದೆ.
ಇದರೊಂದಿಗೆ ಗುಜರಾತ್ ತಂಡದ ನಾಯಕ ಶುಭ್ಮನ್ ಗಿಲ್ ಅವರ ಅರ್ಧ ಶತಕ ವ್ಯರ್ಥಗೊಂಡಿತು. ಅದೇ ರೀತಿ ಸ್ಥಳೀಯ ಗುಜರಾತ್ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿತು. ಗುಜರಾತ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ ನಾಲ್ಕರಲ್ಲಿ ಇದು ಎರಡನೇ ಸೋಲು. ಟೈಟಾನ್ಸ್ ಬಳಗ ಎಸ್ಆರ್ಎಚ್ ಮತ್ತು ಮುಂಬಯಿ ವಿರುದ್ಧ ಗೆದ್ದಿದ್ದರೆ, ಸಿಎಸ್ಕೆ ಹಾಗೂ ಪಂಜಾಬ್ ವಿರುದ್ಧ ಸೋತಿತು.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳು ಪೂರ್ಣಗೊಂಡಾಗ 4 ವಿಕೆಟ್ಗೆ 199 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ 19.5 ಓವರ್ಗಳಲ್ಲಿ 200 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಪಂಜಾಬ್ ತಂಡಕ್ಕೆ ಚೈತನ್ಯ ದೊರಕಿತು. ಪಂಜಾಬ್ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಗೆದ್ದ ಬಳಿಕ ಎರಡು ಪಂದ್ಯಗಳನ್ನು ಸೋತು ಇದೀಗ ನಾಲ್ಕನೇ ಪಂದ್ಯವನ್ನು ಗೆದ್ದಿದೆ.
ಬೃಹತ್ ಮೊತ್ತವನ್ನು ಪೇರಿಸಲು ಮುಂದಾದ ಪಂಜಾಬ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಶಿಖರ್ ಧವನ್ 1 ರನ್ ಗೆ ಔಟಾದರೆ, ಜಾನಿ ಬೈರ್ಸ್ಟೋವ್ 22 ರನ್ಗೆ ವಿಕೆಟ್ ಒಪ್ಪಿಸಿದರು. ಪ್ರಭ್ ಸಿಮ್ರಾನ್ ಸಿಂಗ್ 32 ರನ್ ಬಾರಿಸಿ ನಿರ್ಗಮಿಸಿದರು. ಸ್ಯಾಮ್ ಕರ್ರನ್ 5 ರನ್ಗೆ ಸೀಮಿತಗೊಂಡ ಕಾರಣ ಆ ತಂಡದ ಗೆಲುವಿನ ಆಸೆ ಒಂದು ಬಾರಿಗೆ ಕಮರಿತು. ಅಲ್ಲದೆ, ಸಿಕಂದರ್ ರಾಜಾ 15 ಹಾಗೂ ಜಿತೇಶ್ ಶರ್ಮಾ 16 ರನ್ಗೆ ಔಟಾದರು. ಆದರೆ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶಶಾಂಕ್ ಸಿಂಗ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅದೇ ರಿತಿ ಅಶುತೋಶ್ ಶರ್ಮಾ 17 ಎಸೆತಕ್ಕೆ 31 ರನ್ ಬಾರಿಸಿ ಏಳನೇ ವಿಕೆಟ್ಗೆ 43 ರನ್ ಜತೆಯಾಟ ನೀಡಿದರು. ಇವರಿಬ್ಬರ ಆಟ ಫಲಿತಾಂಶವನ್ನೇ ಬದಲಿಸಿತು.
ಇನ್ನೂ ಗುಜರಾತ್ ತಂಡ 21 ರನ್ಗಳಿಗೆ ತನ್ನ ಮೊದಲು ವಿಕೆಟ್ ಕಳೆದುಕೊಂಡಿತು. ವೃದ್ಧಿಮಾನ್ ಸಾಹ 11 ರನ್ ಬಾರಿಸಿದ ರಬಾಡಾ ಎಸೆತಕ್ಕೆ ಔಟಾದರು. ಆದರೆ, ಇನ್ನೊಂದು ತುದಿಯಲ್ಲಿ ಗಟ್ಟಿಯಾಗಿ ತಳವೂರಿದ್ದ ನಾಯಕ ಶುಭ್ಮನ್ ಗಿಲ್ ಉತ್ತಮವಾಗಿ ಇನಿಂಗ್ಸ್ ಕಟ್ಟಿದರು. ಆರಂಭದಲ್ಲಿ ನಿಧಾನವಾಗಿ ಇನಿಂಗ್ಸ್ ಕಟ್ಟಿದ ಅವರು ಬಳಿಕ ಅಬ್ಬರದಿಂದ ಬ್ಯಾಟ್ ಬೀಸಿದರು. 48 ಎಸೆತಗಳಲ್ಲಿ 89 ರನ್ ಬಾರಿಸಿದರು. ಅವರ ಇನಿಂಗ್ಸ್ನಲ್ಲಿ 6 ಫೋರ್ಗಳು ಹಾಗೂ 4 ಸಿಕ್ಸರ್ಗಳು ಸೇರಿಕೊಂಡಿದ್ದವು. ಹಾಲಿ ಐಪಿಎಲ್ನಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿದ್ದ ಅವರು ಉಪಯುಕ್ತ ಅರ್ಧ ಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು