ಬೆಂಗಳೂರು:- ಗ್ಯಾರಂಟಿಗಳಿಂದ ಬಡವರ ಕುಟುಂಬಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಗ್ಯಾರಂಟಿಗಳಿಂದ ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಇದೆ. ಇಲ್ಲದಿದ್ದರೆ ಹಾಹಾಕಾರ ಶುರುವಾಗುತ್ತಿತ್ತು. ಸಾರ್ವತ್ರಿಕ ಮೂಲ ಆದಾಯದ ತತ್ವದ ತಳಹದಿಯ ಮೇಲೆ ಜನರ ಆದಾಯ ಹೆಚ್ಚಿಸಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆತಿದೆ ಎಂದರು.
ರಾಜ್ಯ ದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕಿದೆ. ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ಸರ್ಕಾರದ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2024 ನೇ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದು, ಈ ವರ್ಷ ರಾಜ್ಯಕ್ಕೆ ಆಶಾದಾಯಕವಾಗಿದೆ ಎಂದರು.