ಬೆಂಗಳೂರು:- ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳ ಪೈಕಿ ಕೊನೆಯ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲಿದ್ದು, ಡಿಸೆಂಬರ್ ಮಾಸಾಂತ್ಯದ ವೇಳೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಿಸಲಾಗಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೆ ಸರ್ಕಾರವು 4 ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದೆ. ಇದೀಗ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ ಯುವ ನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಈ ಮಾಸಾಂತ್ಯದ ವೇಳೆಗೆ ಆರಂಭವಾಗಲಿದ್ದು, ಜನವರಿಯಲ್ಲಿ ಯೋಜನೆ ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ. ಯೋಜನೆಯ ನೋಂದಣಿ, ಸಹಾಯಧನ ಪಾವತಿ ಸೇರಿದಂತೆ ಸಂಪೂರ್ಣ ವಿವರ ನೀಡಲು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ್ ಡಿ.19 ಅಥವಾ 20ರಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
2023ರಲ್ಲಿ ಪದವಿ ಮತ್ತು ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ, ಆರು ತಿಂಗಳಾದರೂ ಉದ್ಯೋಗ ಸಿಗದೆ ಪರದಾಡುತ್ತಿರುವ ಯುವಕ-ಯುವತಿಯರು ಯುವನಿಧಿ ಯೋಜನೆಯ ಲಾಭ ದೊರೆಯಲಿದೆ. ಸರ್ಕಾರದ ಅಂದಾಜಿನಂತೆ 5 ಲಕ್ಷ ಯುವಕ-ಯುವತಿಯರು ಯೋಜನೆ ವ್ಯಾಪ್ತಿಗೊಳಪಡಲಿದ್ದಾರೆ. ಪ್ರಾಥಮಿಕವಾಗಿ ಯೋಜನೆಗೆ 250ರಿಂದ 300 ಕೋಟಿ ರು. ವೆಚ್ಚವಾಗುವ ಅಂದಾಜಿಸಲಾಗಿದೆ.