ಇಂಗ್ಲಿಷ್ನಲ್ಲಿ ಜಾಸ್ಮೀನ್ ಎಂದು ಕರೆಯಲ್ಪಡುವ ಮಲ್ಲಿಗೆ ದೀರ್ಘಕಾಲಿಕ ಪುಷ್ಪ ಬೆಳೆ. ಇದನ್ನು ಪೂಜೆಗೆ, ಮುಡಿಯಲು ಮಾತ್ರವಲ್ಲದೆ, ಸುಗಂಧಿತ ತೈಲ, ಅತ್ತರ್ ತಯಾರಿಸಲೂ ಬಳಸಲಾಗುತ್ತದೆ. ಪುಷ್ಪ ಕೃಷಿಯಲ್ಲಿ ಮಲ್ಲಿಗೆ ಅಗ್ರಗಣ್ಯ. ಇದರಲ್ಲಿ ಹಲವಾರು ತಳಿಗಳಿವೆ. ಆ ಪೈಕಿ ಸುವಾಸನೆ ಮಲ್ಲಿಗೆ ಪ್ರಮುಖವಾದದ್ದು. ಇದನ್ನು ‘ಹಡಗಲಿ ಮಲ್ಲಿಗೆ’ ಅಂತಲೂ ಕರೆಯುತ್ತಾರೆ.
ಪರಿಮಳ ಭರಿತ ಆಕರ್ಶಣೀಯ ಹೂವು ಮಲ್ಲಿಗೆ. ಈ ಹೂವಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಸೂಜಿ ಮಲ್ಲಿಗೆ. ಕಾಡು ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಮುತ್ತುಮಲ್ಲಿಗೆ ಹೀಗೆ ಹಲವಾರು ಜಾರಿಯ ಮಲ್ಲಿಗೆ ಹೂವುಗಳಿದ್ದರೂ ಎಲ್ಲ ರೀತಿಯ ಹೂವುಗಳಿಗೂ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿಯೇ ಮಲ್ಲಿಗೆ ಬೆಳೆಯುವುದು ಕೂಡ ಲಾಭದಾಯಕ ಕೃಷಿಯಾಗಿ ಪರಿಣಮಿಸಿದೆ.
ಬೆಳೆಯುವ ವಿಧಾನ
ಮಲ್ಲಿಗೆ ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಒಮ್ಮೆ ನಾಟಿ ಮಾಡಿದರೆ, ಕನಿಷ್ಠ 20 ವರ್ಷದವರೆಗೆ ಹೂವನ್ನು ಪಡೆಯಬಹುದು. ಮೊದಲು ಜಮೀನನ್ನು ಹದಗೊಳಿಸಿದ ಬಳಿಕ 8 ್ಢ 8 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ನಂತರ 3-4 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಇದು ಗಿಡ ನೆಟ್ಟ 2 ವರ್ಷದ ನಂತರ ಚೆನ್ನಾಗಿ ಹೂವು ಬಿಡಲು ಪ್ರಾರಂಭಿಸುತ್ತದೆ. ಇದಕ್ಕಿಂತ ಮೊದಲೇ ಹೂ ಬಿಡುತ್ತದೆ. ಆದರೆ, ಇಳುವರಿ ಪ್ರಮಾಣ ಕಡಿಮೆ ಇರುತ್ತದೆ. ಇನ್ನು ಹೂವು ಬಿಡಿಸಲು ಆಳುಗಳು ಹೆಚ್ಚು ಬೇಕಾಗುತ್ತವೆ. ನಿತ್ಯವೂ ಹೂ ಬಿಡಿಸಬೇಕು. ಒಂದು ದಿನ ಹೂ ಬಿಡಿಸದಿದ್ದರೆ ಅವು ಹಾನಿಯಾದಂತೆ ಸರಿ.
ಮಲ್ಲಿಗೆ ಕೃಷಿ ಕೈಗೊಳ್ಳಲು ಮಳೆಗಾಲದ ಆರಂಭ ಅಂದರೆ ಜೂನ್ ಪ್ರಶಸ್ತ. ಮಳೆಗಾಲದಲ್ಲಿ ಇದರ ಇಳುವರಿ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹೂವು ಬಿಡುವುದಿಲ್ಲ. ಆ ಸಮಯದಲ್ಲಿ ಗಿಡವನ್ನು 2 ಅಡಿ ಬಿಟ್ಟು ಉಳಿದದ್ದನ್ನು ಕಟಾವು ಮಾಡಬೇಕು. ಚಳಿಗಾಲದ ನಂತರ ಚಿಗುರೊಡೆಯುತ್ತದೆ. ಬಳಿಕ ಹೂವು ಪ್ರಾರಂಭಿಸುತ್ತದೆ. ಈ ರೀತಿ ಪ್ರತಿ ಚಳಿಗಾಲದಲ್ಲೂ ಕಟಾವು ಮಾಡಬೇಕು. ಚೆನ್ನಾಗಿ ನಿರ್ವಹಣೆ ಮಾಡಿದರೆ ವರ್ಷಕ್ಕೆ ಎಕರೆ ಜಮೀನಲ್ಲಿ ಕನಿಷ್ಠ ರು. 3 ಲಕ್ಷ ಆದಾಯ ನಿಶ್ಚಿತ.
ಮಣ್ಣು
ಸಾಮಾನ್ಯವಾಗಿ ಮಲ್ಲಿಗೆ ಎಲ್ಲ ನಮೂನೆಯ ಮಣ್ಣಲ್ಲೂ ಬೆಳೆಯುತ್ತದೆ. ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ಮಸಾರೆ (ಕಲ್ಲುಮಿಶ್ರಿತ ಮಣ್ಣು) ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಬರುತ್ತದೆ.