ಮಲೆನಾಡಿನಲ್ಲಿ ಕಳೆದ ವರ್ಷ ಅಡಕೆ ತೋಟಗಳನ್ನು ನಲುಗಿಸಿದ್ದ ಎಲೆಚುಕ್ಕಿ ಮತ್ತು ಇತರೆ ರೋಗಗಳನ್ನು ಈ ಬಾರಿ ಪ್ರಕೃತಿಯೇ ನಿಯಂತ್ರಣದಲ್ಲಿಟ್ಟಿದೆ.
ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾದಾಗ ಪ್ರಕೃತಿಯು ತನ್ನನ್ನು ತಾನೆ ನಿಯಂತ್ರಿಸಿಕೊಳ್ಳುವಂತೆ ಅಡಕೆ ತೋಟಗಳನ್ನು ಬಾಧಿಸಿದ್ದ ಹಲವು ರೋಗಗಳನ್ನು ಪ್ರಕೃತಿ ನಿಯಂತ್ರಣದಲ್ಲಿಟ್ಟಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ, ಕೊಳೆ, ಹಳದಿ ಎಲೆ, ಹಿಂಗಾರು ಒಣಗು, ಕಾಂಡಕೊರಕ, ಬೇರು ಹುಳ ಮತ್ತು ಇತರೆ ರೋಗಗಳು ತೋಟಗಳನ್ನು ಆವರಿಸಿಕೊಂಡು ಅಡಕೆ ಮರಗಳನ್ನು ನಲುಗಿಸಿದ್ದವು. ಕೇವಲ ತೋಟಗಳಲ್ಲದೆ ರೋಗ ನಿಯಂತ್ರಣದ ಪ್ರಯತ್ನದಲ್ಲಿರೈತರು ಸಹ ಸಂಕಷ್ಟಕ್ಕೀಡಾಗಿದ್ದರು.
ಅತಿಯಾದ ಮಳೆಯಿಂದಾಗಿ ಥಂಡಿ ಮತ್ತು ವಾತಾವರಣದಲ್ಲಿನ ಅತಿಹೆಚ್ಚು ತೇವಾಂಶವು ಎಲೆಚುಕ್ಕಿ ರೋಗ ಉಲ್ಬಣಗೊಳ್ಳಲು ಕಾರಣವಾಗಿತ್ತು. ಈ ವರ್ಷ ವಾಡಿಕೆಗಿಂತ ಕಡಿಮೆಯಾದ ಮಳೆಯು ರೋಗಕ್ಕೆ ಕಡಿವಾಣ ಹಾಕಿದೆ. ರೋಗ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಹತೋಟಿಯಲ್ಲಿದೆ.
ಮಳೆ ಹೆಚ್ಚಾದಾಗಲೆಲ್ಲ ಕಾಣಿಸಿಕೊಳ್ಳುತ್ತಿದ್ದ ಕೊಳೆ ರೋಗದ ಸದ್ದು ಸಹ ಈ ಬಾರಿ ಕೇಳಿ ಬಂದಿಲ್ಲ. ರೋಗ ಬಾಧೆಯಿಂದ ತೋಟ ನೋಡಲು ಸಹ ಬೇಸರವಾಗುತ್ತಿತ್ತು. ಈ ವರ್ಷ ಸ್ವಲ್ಪ ಸುಧಾರಿಸಿವೆ ಎನ್ನುತ್ತಾರೆ ರೈತರು. ರೋಗ ಬಾಧೆಗೆ ನಲುಗಿದ ತೋಟಗಳು ಸುಧಾರಿಸಿಕೊಂಡರೂ ಇಳುವರಿ ಮಾತ್ರ ಇಲ್ಲ. ಆದರೆ, ಕೆಲವೆಡೆ ಮಳೆ ಕಡಿಮೆಯಾದರೂ ಇಳುವರಿ ಸುಧಾರಿಸಿದೆ.