ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಮನೆಯ ದಿನಸಿಗಳನ್ನು ಗಳಿಸುವ ಚಟುವಟಿಕೆಯ ಬಗ್ಗೆ ಬಗ್ಗೆ ಹಲವು ಕಿವಿಮಾತುಗಳನ್ನು ಹೇಳಿದ್ದರು. ಹಿಂದಿನ ಹಲವು ವಾರಗಳಲ್ಲಿ ತಪ್ಪು ಲೆಕ್ಕಾಚಾರದಿಂದ, ಸಿಲ್ಲಿ ತಪ್ಪುಗಳಿಂದ ದಿನಸಿಗಳನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದ್ದರು. ಅಷ್ಟೇ ಅಲ್ಲ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಟಿಪ್ಸ್ ಕೂಡ ಕೊಟ್ಟಿದ್ದರು.
ಆಗ ಯಾರಿಗೂ ಸುದೀಪ್ ಯಾಕೆ ಇದನ್ನು ಹೇಳುತ್ತಿದ್ದಾರೆ ಎಂದು ಅರ್ಥವಾಗಿರಲಿಲ್ಲ. ಅವರ ಮಾತಿನ ಅರ್ಥ ಈಗ ಅಂದರೆ, ವಾರದ ಮೊದಲ ದಿನ ಅರ್ಥವಾಗಿದೆ. ಅದೂ ಕಾಲಮಿಂಚಿ ಹೋದಮೇಲೆ! ಹಾಗಾದರೆ ಆಗಿದ್ದೇನು? ಇದರ ಸುಳಿವು JioCinemaಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಿಕ್ಕಿದೆ.
ಬಿಗ್ಬಾಸ್ ದಿನಸಿ ಪಡೆದುಕೊಳ್ಳುವ ಕುರಿತು ಒಂದು ಟಾಸ್ಕ್ ನೀಡಿದ್ದಾರೆ. ನಾಲ್ಕು ಸ್ಪರ್ಧಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಝರ್ ಎದುರು ನಿಂತುಕೊಂಡಿದ್ದಾರೆ. ಬಿಗ್ಬಾಸ್ ಮನೆಗೆ ಬೇಕಾದ ದಿನಸಿಗಳನ್ನು ಮತ್ತು ಅವುಗಳ ಪ್ರಮಾಣವನ್ನು ಹೇಳುತ್ತ ಹೋಗುತ್ತಾರೆ. ಆಗ ಬೇಕಾದ ದಿನಸಿಗಳ ಹೆಸರು-ಪ್ರಮಾಣ ಬಂದಾಗ ಬಝರ್ ಒತ್ತಬೇಕು.
ಈ ಟಾಸ್ಕ್ ಮೂಲ ಲಾಜಿಕ್ ಗೊತ್ತಾಗದೆ ಸದಸ್ಯರು ಎಡವಟ್ಟು ಮಾಡಿಕೊಂಡಿರುವಂತಿದೆ. ಪ್ರಮಾಣ ನೋಡಿಕೊಂಡು ಬಝರ್ ಒತ್ತುವಲ್ಲಿ ಎಡವಿರುವ ಸಂಗೀತಾ ಅಕ್ಕಿ ಐದು ಕೇಜಿ ಎಂದು ಬಿಗ್ಬಾಸ್ ಘೋಷಿಸಿದ ತಕ್ಷಣ ಬಝರ್ ಒತ್ತಿಬಿಟ್ಟಿದ್ದಾರೆ. ಇದರಿಂದ ಇಡೀ ಮನೆ ಐದು ಕೆಜಿ ಅಕ್ಕಿಯಲ್ಲಿ ವಾರ ಕಳೆಯಬೇಕಾಗಿದೆ. ಜೊತೆಗೆ ಎಂಟು ಕೆಜಿ ಗೋದಿಹಿಟ್ಟು ಸಿಕ್ಕಿದೆ. ಉಳಿದ ಹಲವು ದಿನಸಿಗಳು ಒಂದು ಎರಡು ಕೇಜಿಗಳಷ್ಟೇ ದೊರಕಿವೆ.
‘ಈಗೋಗಳಲ್ಲೇ ಸಾಯ್ತಾರೆ. ಮನೆ ದಿನಸಿ ಎಂದು ಹೇಳಿ ಕಳಿಸಿದೀನಿ’ ಎಂದು ಸಿಡಿದಿದ್ದಾರೆ ವಿನಯ್. ತುಕಾಲಿ ಸಂತೋಷ್, ‘ಹೊಟ್ಟೆ ಹಸಿವು ಕಂಟ್ರೋಲ್ ಮಾಡಿಕೊಂಡು ಬಿಡೋಣ’ ಎಂದು ಅಸಮಧಾನ ಹೊರಗೆ ಹಾಕಿದ್ದಾರೆ.
‘ಹಸಿವಿನಿಂದಲೇ ಎಲ್ಲ ಗಲಾಟೆಗಳೂ ಶುರುವಾಗುವುದು’ ಎಂಬ ಕಿಚ್ಚನ ಮಾತಿಗೆ ವಾರದ ಮೊದಲ ದಿನವೇ ಪುರಾವೆ ಸಿಕ್ಕಿದೆ. ಎರಡು ಮೂರು ದಿನಕ್ಕೂ ಸಾಲದ ದಿನಸಿಗಳಲ್ಲಿ ಬಿಗ್ಬಾಸ್ ಮನೆಯವರು ವಾರವಿಡೀ ಹೇಗೆ ಕಳೆಯುತ್ತಾರೆ? ಇದಕ್ಕೆ ಏನು ಪರಿಹಾರ ಕಂಡುಕೊಳ್ಳುತ್ತಾರೆ? ಅಥವಾ ಬಿಗ್ಬಾಸ್ ಅವರ ಸಹಾಯಕ್ಕೆ ಬರುತ್ತಾರಾ? ಕಾದು ನೋಡಬೇಕಿದೆ.