ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ರೆಪೋ ದರ ಏರಿಕೆ ಬೆನ್ನಲ್ಲೇ 2023ನೇ ಸಾಲಿನ ಜನವರಿ-ಮಾರ್ಚ್ ಅವಧಿಗೆ ಅಂಚೆ ಕಚೇರಿಯ ಕೆಲವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಈ ಮೂಲಕ ಉಳಿತಾಯ ಹೆಚ್ಚಿಸಲು ನಾಗರಿಕರಿಗೆ ಉತ್ತೇಜನ ನೀಡಿದೆ. ಅಂಚೆ ಇಲಾಖೆ ಟರ್ಮ್ ಡೆಫಾಸಿಟ್, ನ್ಯಾಷನಲ್ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ.
ಭಾರತೀಯ ಅಂಚೆ ಇಲಾಖೆ ಗ್ರಾಹಕರ ಅನುಕೂಲಕ್ಕಾಗಿ ಹಲವು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದ್ರಲ್ಲೂ ಈ ಯೋಜನೆಯಡಿಯಲ್ಲಿ ಕನಿಷ್ಠ ಮೊತ್ತವನ್ನು ಪಾವತಿ ಮಾಡಿದ್ರೆ, ಗರಿಷ್ಠ ಮೊತ್ತವನ್ನು ವಾಪಾಸ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಒಂದೊಮ್ಮೆ ನೀವು ತಿಂಗಳಿಗೆ 1,500 ರೂಪಾಯಿ ಹೂಡಿಕೆ ಮಾಡಿದ್ರೆ, 34 ಲಕ್ಷ ರೂಪಾಯಿಯ ವರೆಗೂ ರಿಟರ್ಸ್ ಪಡೆಯಬಹುದಾಗಿದೆ.
ಗ್ರಾಮ ಸುರಕ್ಷಾ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಕಂತುಗಳನ್ನು ಪಾವತಿ ಮಾಡಬಹುದಾಗಿದೆ. ವಾರ್ಷಿಕವಾಗಿ ಗರಿಷ್ಠ 10 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಯ ವರೆಗೂ ಹೂಡಿಕೆ ಮಾಡಬಹುದಾಗಿದೆ. ವಯಸ್ಸಿನ ಆಧಾರದ ಮೇಲೆ ಮಾಸಿಕ ಕಂತುಗಳ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ.
ನಿಮ್ಮ ವಯಸ್ಸು 19 ವರ್ಷ ಎಂದು ತಿಳಿದುಕೊಳ್ಳಿ. ನೀವು ಪ್ರತೀ ತಿಂಗಳು 10 ಲಕ್ಷ ರೂಪಾಯಿ ಹಣವನನ್ನು ಹೂಡಿಕೆ ಮಾಡಲು ಬಯಸಿದ್ರೆ 55 ವರ್ಷಗಳ ಅವಧಿಗೆ ಮಾಸಿಕ 1,515 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇನ್ನು 58 ವರ್ಷಗಳ ಅವಧಿಗೆ ಮಾಡಿದ್ರೆ 1,463 ರೂಪಾಯಿ ಪ್ರೀಮಿಯಂ ಹಾಗೂ 60 ವರ್ಷಗಳಿಗೆ ಹೂಡಿಕೆ ಮಾಡಿದ್ರೆ, 1,411 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗಿದೆ.
55 ವರ್ಷಗಳ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡ್ರೆ ನಿಮಗೆ 31.60 ಲಕ್ಷ ರೂಪಾಯಿ, 58 ವರ್ಷದ ಅವಧಿಗೆ 33.40 ಲಕ್ಷ ರೂಪಾಯಿ ಹಾಗೂ 60 ವರ್ಷ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡಿದ್ರೆ ನಿಮಗೆ 34.60 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ. ಗ್ರಾಮೀಣ ಜನರಿಗಾಗಿ ಅಂಚೆ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಸುಲಭವಾಗಿ ಎಲ್ಲರೂ ಕೂಡ ಹೂಡಿಕೆ ಮಾಡಬಹುದಾಗಿದೆ.