ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆಯನ್ನು ಕಂಟನಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಸಲಾಯಿತು. ಶಾಲಾ ಆವರಣದಲ್ಲಿ ಗ್ರಾಮಸಭೆ ಆಯೋಜನೆ ಮಾಡಿ ದ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಉಂಟಾಗಿತ್ತು.
ಶಾಲಾ ಶಿಕ್ಷಕರ ಬಳಿ ಶಾಲಾ ಆವರಣದಲ್ಲಿ ಗ್ರಾಮ ಸಭೆ ನಡೆಸಲು ಅವಕಾಶ ಕೊಡಲು ಕಾರಣವೇನು ಎಂಬ ಮಾದ್ಯಮಗಳ ಪ್ರಶ್ನೆಗೆ ಬೇಜವಾಬ್ದಾರಿಯಿಂದ ಉತ್ತರಿಸಿದ ಶಿಕ್ಷಕ ಧನಂಜಯ ಅವರು, ಮಾಡಲಿ ಬಿಡಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಿಂತಲೂ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡವರಲ್ಲ, ಏನಾದರೂ ಮಾಡಿಕೊಳ್ಳಲಿ ಎಂದು ಉದ್ಧಟತನದಿಂದ ಉತ್ತರಿಸಿದರು ಎನ್ನಲಾಗಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ರಂಗಪ್ಪ ಅವರು ಪ್ರತಿಕ್ರಿಯಿಸಿ,
ಕೂಸಿನ ಮನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಶಾಲಾ ಆವರಣದಲ್ಲಿ ಗ್ರಾಮಸಭೆ ನಡೆಸಲು ಸಂಬಂಧಪಟ್ಟವರು ಯಾವುದೇ ರೀತಿಯ ಅನುಮತಿಯನ್ನೂ ಪಡೆದುಕೊಂಡಿಲ್ಲ. ಈ ಕುರಿತು ಶಾಲಾ ಮುಖ್ಯೋಪಾಧ್ಯಯರಿಂದ ವರದಿ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಗ್ರಾಮ ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಮುನಿರಾಜು, ಪಿಡಿಒ ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.