ನವದೆಹಲಿ: ಸೈಬರ್ ಕ್ರೈಂ ವಂಚನೆ, ಡಿಜಿಟಲ್ ಅರೆಸ್ಟ್ ಇನ್ನಿತರ ನೆಪದಲ್ಲಿ ಬರುವ ಕರೆಗಳಿಂದ ದೂರವಿರಿ ಎಂದು ಕರ್ನಾಟಕದ ಪ್ರಕರಣವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಜಾಗೃತಿ ಮೂಡಿಸಿದ್ದಾರೆ. ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಇಂದು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 115 ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂ ವಂಚನೆಯ ಕುರಿತು ಮಾತನಾಡಿದ ಅವರು, ಸೈಬರ್ ಕ್ರೈಂ ವಂಚನೆ, ಡಿಜಿಟಲ್ ಅರೆಸ್ಟ್, ಪೊಲೀಸ್ ತನಿಖೆ ನೆಪದಲ್ಲಿ ವಿಡಿಯೋ ಕಾಲ್, ಪೊಲೀಸ್, ಸಿಬಿಐ, ಇಡಿ ಹೀಗೆ ಇನ್ನಿತರ ನೆಪಗಳನ್ನಿಟ್ಟುಕೊಂಡು ಕಾಲ್ ಮಾಡುತ್ತಾರೆ. ಕರ್ನಾಟಕದ ಪ್ರಕರಣ ಉಲ್ಲೇಖಿಸಿ, ನಿಮ್ಮ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ಭಯದ ವಾತಾವರಣ ನಿರ್ಮಾಣ ಮಾಡಿ, ನಿಮ್ಮನ್ನು ಹೆದರಿಸುತ್ತಾರೆ. ಜೊತೆಗೆ ಸಮಯದ ಒತ್ತಡ ಹಾಕಿ ಬಂಧನದ ಆತಂಕ ನಿರ್ಮಿಸುತ್ತಾರೆ ಎಂದು ತಿಳಿಸಿದರು.
ಡಿಜಿಟಲ್ ಅರೆಸ್ಟ್ ವಂಚನೆಗೆ ಎಲ್ಲ ವಯಸ್ಸಿನ ಜನರಿದ್ದಾರೆ. ಈ ಮೂಲಕ ತಮ್ಮ ದುಡಿಮೆಯ ಹಣವನ್ನು ಕಳೆದುಕೊಳ್ಳುತ್ತಾರೆ. ಇಂತಹ ಕಾಲ್ ಬಂದರೆ ಆತಂಕಗೊಳ್ಳಬೇಡಿ. ನಿಮ್ಮ ಯಾವುದೇ ಮಾಹಿತಿಯನ್ನು ನೀಡಬೇಡಿ. ಅಂತಹ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಳ್ಳಿ. ಸರ್ಕಾರಿ ತನಿಖಾ ಸಂಸ್ಥೆಗಳು ಹೀಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕುವುದಿಲ್ಲ.
ಇಂತಹ ಘಟನೆ ನಡೆದರೆ ರಾಷ್ಟ್ರೀಯ ಸೈಬರ್ ಕ್ರೈಂಗೆ ದೂರು ನೀಡಿ. ಡಿಜಿಟಲ್ ಅರೆಸ್ಟ್ ಎನ್ನುವುದು ಕಾನೂನಿನ ವ್ಯವಸ್ಥೆಯಲ್ಲಿಯೇ ಇಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರದ ಸಂಸ್ಥೆಗಳ ತನಿಖೆ ಮಾಡುತ್ತಿವೆ. ಇಂತಹ ಕಾಲ್ ಮಾಡುವುವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಹಾಗೂ ಅಂತವರ ಐಡಿ ಮತ್ತು ಸಿಮ್ ಬಂದ್ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.
ಭಾರತವು ಪ್ರತಿ ಯುಗದಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಧೈರ್ಯ ಮತ್ತು ದೂರದೃಷ್ಟಿ ಹೊಂದಿರುವ ಇಬ್ಬರು ಮಹಾನ್ ವೀರರ ಬಗ್ಗೆ ಚರ್ಚಿಸುತ್ತಿದ್ದೇನೆ. ಸರ್ದಾರ್ ಪಟೇಲ್ 150ನೇ ಜನ್ಮ ವರ್ಷಾಚರಣೆಯು ಅ.31 ರಿಂದ ಹಾಗೂ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವರ್ಷಾಚರಣೆಯು ನ.15 ರಿಂದ ಪ್ರಾರಂಭವಾಗುತ್ತದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವಿಭಿನ್ನ ಸವಾಲುಗಳನ್ನು ಹೊಂದಿದ್ದರು. ಆದರೆ ಅವರ ದೃಷ್ಟಿ ಒಂದೇ ಆಗಿತ್ತು ಅದು ದೇಶದ ಏಕತೆ ಎಂದರು.