ವಿಜಯಪುರ: ಯುವಕರಿಗೆ ಪ್ರೋತ್ಸಾಹ ಕೊಡುತ್ತೆ ಎಂಬುದನ್ನು ಬಿಜೆಪಿ ತೋರಿಸಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಶುಭ ಕೋರಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಮ್ಮ ಪಕ್ಷ ಸರ್ಕಾರವನ್ನು ಕಳೆದುಕೊಂಡಿದೆ. ಹೀಗಾಗಿ ಪಕ್ಷದ ವರಿಷ್ಠರು ಅಳೆದು ತೂಗಿ ಯುವನಾಯಕ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ.
ಬಿಜೆಪಿ ಕೇಂದ್ರ ವರಿಷ್ಠರು ಲೆಕ್ಕಾಚಾರ ಮಾಡಿಯೆ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಸಕ್ರಿಯ ರಾಜಕೀಯದಲ್ಲಿರುವ ಆಕಾಂಕ್ಷಿಗಳು ಅವಕಾಶ ತಪ್ಪಿದ್ದಕ್ಕೆ ಸಹಜವಾಗಿ ಅಸಮಾಧಾನ ವ್ಯಕ್ತಪಡಿಸುವುದು ಸಹಜ ಪ್ರಕ್ರಿಯೆ ಎಂದು ಹೇಳಿದರು. ಮನೆಯಲ್ಲಿ ಅನುಭವಿ ತಂದೆ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಎಲ್ಲ ಸಮುದಾಯದ ನಾಯಕರನ್ನು ಒಗ್ಗೂಡಿಸಿ ಕರೆದೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2013 ರಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯ ತಮ್ಮದೇ ಸರ್ಕಾರವಿದ್ದರೂ 2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ ಕಾರಜೋಳ, ಆಯಾ ಕಾಲಘಟ್ಟದಲ್ಲಿ ಜನರ ಮನಸ್ಥಿತಿಯೂ ಬದಲಾಗುತ್ತದೆ. ಗ್ಯಾರಂಟಿ ತೋರಿಸಿ ಕಾಂಗ್ರೆಸ್ ಗೆದ್ದಿದೆ. ಹಾಗಂತ ಯಾವುದೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಗ್ಯಾರಂಟಿ ಹೆಸರಿನ ಸುಳ್ಳು ಕಾರಣ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದು ಬರಲಿ ಎಂದು ಸವಾಲು ಹಾಕಿದರು.