ಕೋಲಾರ : ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗುತ್ತಿದೆ. ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸಲು ಇವರ ಬಳಿ ಹಣವಿದೆ, ರೈತರಿಗೆ ನೀಡಲು ಹಣ ಇಲ್ಲವೇ, ಹಾಗಿದ್ದರೆ ಕುರ್ಚಿ ಖಾಲಿ ಮಾಡಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ರೈತರಿಗೆ ಸರ್ಕಾರ 25 ಸಾವಿರ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪಾಪರ್ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಾವೇ ಹಣ ಕೊಡುತ್ತೇವೆ, ನಮ್ಮ ರೈತರಿಂದಲೇ ನೀವು ಭಿಕ್ಷೆ ಪಡೆಯಿರಿ, ಎಲ್ಲ ರೈತರೇ ಸರ್ಕಾರಕ್ಕೆ 2 ಸಾವಿರ ರೂ.ನೀಡುತ್ತಾರೆ. ಇಂತಹ ಸ್ಥಿತಿಗೆ ತಲುಪಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ಅಲ್ಪಸಂಖ್ಯಾತ ಇಲಾಖೆಯ ಸಚಿವರು ಮನವಿ ಕೊಟ್ಟ ಮೂರು ದಿನಗಳಲ್ಲಿ ಮುಸ್ಲಿಮರಿಗೆ 1 ಸಾವಿರ ಕೋಟಿ ರು.ಗಳ ಅನುದಾನವನ್ನು ಕಾಲನಿ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಎಂದರು. ರೈತರನ್ನು ಕಡೆಗಣಿಸಿ ಟಿಪ್ಪುವನ್ನು ವೈಭವೀಕರಿಸುವ ಮೂಲಕ ಅಲ್ಪಸಂಖ್ಯಾತರನ್ನು ಒಲೈಸಿಕೊಳ್ಳುತ್ತಿದ್ದೀರಿ, ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚತ್ತು ಕಾಳಜಿ ಇಲ್ಲವಾಗಿದೆ. ಸರ್ಕಾರದ ೫ ಗ್ಯಾರಂಟಿಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಟೀಕಿಸಿದರು.