ಬೆಂಗಳೂರು/ ಬೆಳಗಾವಿ:- ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿರುವ ವಿಚಾರವಾಗಿ ಪರಿಷತ್ ಶಾಸಕ TA ಶರವಣ ಅವರು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಟಿಎ ಶರವಣ ಅವರು,
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿ 3 ವರ್ಷವಾದರೂ ಮಂಡಳಿ ರಚನೆ ಇನ್ನೂ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಕಿತ್ತೂರು ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಮಾನ್ಯ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ಬಜೆಟ್ ನಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಘೋಷಿಸಿದ್ದರು.
ಅದಾಗಿ ಮೂರು ವರ್ಷಗಳಾಗಿದ್ದರೂ ಮಂಡಳಿ ರಚನೆ ಕನಸಾಗಿಯೇ ಉಳಿದಿದೆ. ಈ ಅಧಿವೇಶನದಲ್ಲಾದರೂ ಮಂಡಳಿ ರಚನೆ ಬಗ್ಗೆ ಸರ್ಕಾರ ಘೋಷಿಸಬೇಕು. ಅಲ್ಲಿರುವ ಹಿಂದುಳಿದ ಗ್ರಾಮಗಳ ಅಭಿವೃದ್ಧಿ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಅವರು ಒತ್ತಾಯಿಸಿದರು.