ಹಾವೇರಿ;– ಸಿಎಂ, ಸಚಿವರು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ KS ಈಶ್ವರಪ್ಪ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಶಾಸಕರಿಗೆ ಅನುದಾನ ನೀಡುತ್ತಿಲ್ಲ. ರಸ್ತೆ ಗುಂಡಿಗಳಿಗೆ ಒಂದು ಬುಟ್ಟಿ ಮಣ್ಣು ಹಾಕಿಲ್ಲ. ಎಲ್ಲ ಸಚಿವರು ಇರುವಷ್ಟು ದಿನ ಲೂಟಿ ಹೊಡೆಯೋಣ ಅಂತ ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಮಗನದ್ದು ಇದರಲ್ಲಿ ಸಿಂಹ ಪಾಲಿದೆ’ ಎಂದರು.
ಕಾಂಗ್ರೆಸ್ನಲ್ಲಿ ಒಳಜಗಳ ತಾರಕಕ್ಕೇರಿದ್ದು, ಸರ್ಕಾರ ಐದು ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವೇ ಇಲ್ಲ. ಎಷ್ಟು ದಿನ ಇರುತ್ತೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ವಿರುದ್ಧ ಗುತ್ತಿಗೆದಾರರ ಸಂಘದ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗಲೂ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಅಂತಹ ಹೇಳಿದ್ದೆ. ಡಿಕೆಶಿ ಹೆಸರಲ್ಲಿ ಎಂಜಿನಿಯರ್ ಪ್ರಹ್ಲಾದ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಇಂಥವರು ಹಣ ಕೊಡುತ್ತಿದ್ದಾರೆ ಅಂತ ಹೇಳಿದ ಮೇಲೂ ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಭ್ರಷ್ಟಾಚಾರಕ್ಕೆ ಲೈಸನ್ಸ್ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಎಲ್ಲೇ ಹೋದರೂ ರೈತರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲಾ ಬೆಳೆ ನಾಶ ಆಗಿದೆ. ಆದರೂ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಯಾವುದೇ ಸಚಿವರು ಒಂದು ಹೊಲಕ್ಕೆ ಹೋಗಿಲ್ಲ, ರೈತನ ಬಳಿ ಮಾತಾಡಿಲ್ಲ. ಸರ್ವೇ ಮಾಡುವಲ್ಲೂ ವಿಳಂಬ ಮಾಡಿ, ನಂತರ ಬರ ಘೋಷಣೆಗೂ ತಡ ಮಾಡಿದರು. ಗ್ಯಾರಂಟಿಗಳಿಗೆ ಹಣ ಕೊಡುತ್ತೇವೆ ಎಂದು ಅಲ್ಲಿಯೂ ವಿಫಲರಾಗಿದ್ದಾರೆ. ರೈತರಿಗೆ ಪರಿಹಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ರೈತರಿಗೆ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.