ರೈತರೇ ಜಮೀನುಗಳ ಪೋಡಿ, ದುರಸ್ತಿ ಕಾರ್ಯ ಮಾಡಲು ಹೊಸ ತಂತ್ರಾಂಶ ಜಾರಿಗೊಳಿಸಲಾಗಿದೆ ಹಾಗೆ ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರ ನಕ್ಷೆಗಳು ಇನ್ನು ಮುಂದೆ ಆನ್ಲೈನ್ನಲ್ಲೇ ಸಿಗಲಿದೆ.
ಪೋಡಿ ಎಂದರೇನು?: ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಅಂದರೆ ಒಂದೇ ಸರ್ವೇ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಎಲ್ಲಾ ಸದಸ್ಯರ ಹೆಸರಿನ ಮೇಲೆ ಸರ್ವೇ ನಂಬರ್ ಮಾಡುವುದನ್ನೇ ಪೋಡಿ ಎಂದು ಕರೆಯುವರು.
ಪೋಡಿ ನಕ್ಷೆ ಜಮೀನಿಗೆ ಅಗತ್ಯ ಏಕೆ? : ಕುಟುಂಬದ ಸದಸ್ಯರ ಪಾಲುಗಾರಿಕೆ, ಭೂ ಆಸ್ತಿಯ ಕೆಲವು ಭಾಗ ಮಾರಾಟ, ದಾನಪತ್ರ, ನಿವೇಶನಕ್ಕೆ ಬಳಕೆ, ಭೂ ಪರಿವರ್ತನೆ ಹೀಗೆ ಹಲವಾರು ಚಟುವಟಿಕೆಗಳಿಗೆ ಪೋಡಿ ನಕ್ಷೆ ತುಂಬಾ ಅವಶ್ಯಕವಾಗಿದೆ. ಒಂದು ಸರ್ವೇ ನಂಬರಿನಲ್ಲಿ ಹಲವರ ಹೆಸರಿದ್ದರೆ ಮುಂದೆ ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕೆ ತೊಂದರಯಾಗುತ್ತದೆ. ಬ್ಯಾಂಕಿನಲ್ಲಿ ಸಾಲ ಸೌಲಭ್ಯವೂ ಸಿಗುವುದಿಲ್ಲ. ಜಮೀನು ಮಾರಾಟ ಸಂದರ್ಭದಲ್ಲಿಯೂ ತೊಡಕಾಗುವ ಸಾಧ್ಯತೆ ಇರುತ್ತದೆ.
ರೈತರಿಗಾಗಿ ಸರ್ಕಾರದಿಂದ ಹೊಸ ಯೋಜನೆ: ಜಮೀನುಗಳ ಪೋಡಿ, ದುರಸ್ತಿ ಕಾರ್ಯ ಮಾಡಲು ತಂತ್ರಾಂಶ ಜಾರಿ!
ಪೋಡಿ ನಕ್ಷೆ ಮಾಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಈಗ ಆನ್ಲೈನ್ ವ್ಯವಸ್ಥೆಯನ್ನು ಮಾಡಿದೆ. ರೈತರು ಸ್ವತಃ ಅವರೆ ಮೊಬೈಲ್ ನಲ್ಲಿ ಜಮೀನಿನ ಪೋಡಿ ನಕ್ಷೆ ತಯಾರಿಸಿಕೊಳ್ಳಬಹುದು. ಸಹೋದರರು, ಸಂಬಂಧಿಕರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಾಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ.
ಮೊಬೈಲ್ ನಲ್ಲಿ ಪೋಡಿ ನಕ್ಷೆ ಪಡೆಯುವುದೇಗೆ? : ರೈತರು ಆನ್ಲೈನ್ ಮೂಲಕ ಪೋಡಿ ನಕ್ಷೆ ಪಡೆಯಲು ಈ https://bhoomojini.karnataka.gov.in/Service27 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂ ಕಂದಾಯ ಇಲಾಖೆಯ ಸ್ವಾವಲಂಬಿ ಆ್ಯಪ್ ಪೇಜ್ ಓಪನ್ ಆಗುತ್ತದೆ. ರೈತರು ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು.
ನಂತರ ಮೊಬೈಲ್ ಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿಯಿದ್ದರೆ ಸಮಸ್ಯೆಯಾಗುವುದಿಲ್ಲ. ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ನಮೂದಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಪೋಡಿ ನಕ್ಷೆ ಸಿಗುತ್ತದೆ.