ಸಂಗೀತ ಪ್ರೀಯರ ನೆಚ್ಚಿನ ಕಾರ್ಯಕ್ರಮವಾದ ಸರಿಗಮಪ ಸೀಸನ್ 21 ಇನ್ನೆನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಮೂಲಕ ಝೀ ಕನ್ನಡ ವಾಹಿನಿ ಸಂಗೀತ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.
ಪ್ರತಿ ಭಾರಿಯೂ ವಿಭಿನ್ನ ರೀತಿಯ ಪ್ರೋಮೋಗಳನ್ನು ಸರಿಗಪಮ ಬಿಡುಗಡೆ ಮಾಡುತ್ತದೆ. ಅಂತೆಯೇ ಈ ಭಾರಿ ಕೂಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದ್ದು ಪ್ರೋಮೋ ಸಖತ್ ಮಜವಾಗಿದೆ. ಅಡ್ವೆಂಚರ್, ಥ್ರಿಲ್ಲಿಂಗ್ ಕಿಕ್ ಪಡೆಯೋಕೆ ಸರಿಗಮಪ ಶೋ ನೋಡಿ ಎನ್ನುವ ರೀತಿಯಲ್ಲಿ ಕಾನ್ಸೆಪ್ಟ್ ಇದೆ. ವಿಶೇಷ ಎಂದರೆ ಗುರುವಿನ ಸ್ಥಾನ ಪಡೆದಿರೋ ರಾಜೇಶ್ ಕೃಷ್ಣನ್ ಅವರು ಕಾರ್ಯಕ್ರಮಕ್ಕೆ ಮತ್ತೆ ಮರಳಿದ್ದಾರೆ.
ಈ ಮೊದಲು ‘ಸರಿಗಮಪ’ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರು ಜಡ್ಜ್ ಆಗಿದ್ದರು. ಕಲರ್ಸ್ ಕನ್ನಡದಲ್ಲಿ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭ ಆದ ಬಳಿಕ ರಾಜೇಶ್ ಅವರು ಅಲ್ಲಿಗೆ ತೆರಳಿದರು. ಈ ಕಾರಣಕ್ಕೆ ಅವರು ಈ ಕಾರ್ಯಕ್ರಮದಿಂದ ದೂರ ಆಗಬೇಕಾಯಿತು. ಈ ಬಗ್ಗೆ ಫ್ಯಾನ್ಸ್ಗೆ ಬೇಸರ ಇತ್ತು. ಈಗ ಬೇಸರ ದೂರ ಆಗುವ ಸಮಯ ಬಂದಿದೆ. ರಾಜೇಶ್ ಕೃಷ್ಣನ್ ಅವರು ಮರಳಿ ಜೀ ಕನ್ನಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಮೊದಲು ಮೂವರು ಸೇರಿ ಸ್ಕೈ ಡೈವಿಂಗ್ ಮಾಡುತ್ತಾರೆ. ಆದರೆ, ಥ್ರಿಲ್ ಬರೋದೇ ಇಲ್ಲ. ನಂತರ ಮರಳುಗಾಡಲ್ಲಿ ತೂಫಾನ್ ಬರುವಾಗ ಇವರು ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಅಲ್ಲಿಯೂ ಅವರಿಗೆ ಮಜಾ ಸಿಗೋದಿಲ್ಲ. ಆ ಬಳಿಕ ಹಿಮಾಲಯಕ್ಕೆ ಟ್ರೆಕ್ ಹೋಗುತ್ತಾರೆ. ಏನೇ ಆದರೂ ಥ್ರಿಲ್ ಮಾತ್ರ ಸಿಗೋದಿಲ್ಲ.
‘ಆಕಾಶದಿಂದ ಭೂಮಿಯತನಕ ಓಡಾಡಿದ್ವಿ. ಥ್ರಿಲ್ ಮಾತ್ರ ಸಿಕ್ಕಿಲ್ಲ’ ಎಂದ ಅವರಿಗೆ ಆಗ ಕಾಣೋದೇ ಸರಿಗಮಪ. ‘ಥ್ರಿಲ್ ಎಲ್ಲಿ ಸಿಗುತ್ತದೆ ಅನ್ನೋದು ಗೊತ್ತಾಯ್ತು’ ಎನ್ನುತ್ತಾರೆ ಅವರು. ‘ಸರಿಗಮಪ’ ಶೀಘ್ರದಲ್ಲೇ ಬರಲಿದೆ ಎಂದು ಹೇಳಲಾಗಿದೆ. ‘ನೀವಿಷ್ಟು ದಿನ ಕಾತರ, ಕುತೂಹಲದಿಂದ ಕಾಯ್ತಿದ್ದ ಸಂಗೀತ ಸಾಮ್ರಾಜ್ಯದ ವೈಭವ ಹೊಸ ಥ್ರಿಲ್ನೊಂದಿಗೆ ಮತ್ತೆ ಬರ್ತಿದೆ ನಿಮ್ಮ ಮುಂದೆ. ಸರಿಗಮಪ ಅತಿ ಶೀಘ್ರದಲ್ಲಿ’ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಗಾಯಕ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರ ಜೊತೆಗೆ ಕುಚುಕು ಗೆಳೆಯ ರಾಜೇಶ್ ಅವರು ಜಡ್ಜ್ ಸೀಟ್ ಅಲಂಕರಿಸಲಿದ್ದಾರೆ. ಇನ್ನೂ ಮಹಾಗುರು ಹಂಸಲೇಖ ಅವರು ಪ್ರೊಮೋದಲ್ಲಿ ಕಾಣಿಸಿಲ್ಲ. ಅವ್ರು ಶೋನಲ್ಲಿ ಇರೋದು ಡೌಟು ಎನ್ನಲಾಗ್ತಿದೆ. ಸ್ಪೆಷಲ್ ಗೆಸ್ಟ್ ಆಗಿ ಬರುವ ಚಾನ್ಸ್ ಇದೆ. ಮಿಕ್ಕಂತೆ ಶೋಗೆ ಅನುಶ್ರೀ ಅವರ ಸಾರಥ್ಯ ಇರಲಿದೆ. ಈಗಾಗಲೇ ಡಿಕೆಡಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದ್ದು, ಆ ಜಾಗಕ್ಕೆ ಸರಿಗಮಪ ಬರಲಿದೆ. ಹಲವು ತಿಂಗಳುಗಳ ಹಿಂದಿಯೇ ಆಡಿಷನ್ ಕಂಪ್ಲೀಟ್ ಆಗಿದ್ದು, ಸ್ಪರ್ಧಿಗಳು ಮಾಹಾ ವೇದಿಕೆಯ ಮೇಲೆ ವಿಜೃಂಭಿಸೋಕೆ ಇನ್ನೇರಡೇ ವಾರ ಮಾತ್ರವೇ ಬಾಕಿ ಇದೆ.