ಬೆಂಗಳೂರು: ಸುಮಾರು ಏಳು ವರ್ಷಗಳ ನಂತರ ಪಿಡಿಒ ನೇಮಕಾತಿಗೆ ಚಾಲನೆ ದೊರಕಿದ್ದು, ಕಲ್ಯಾಣ ಕರ್ನಾಟಕದ 97 ಹುದ್ದೆಗಳು ಸೇರಿ ಒಟ್ಟು 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯಗಳ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಏ.15ರಿಂದ ಮೇ 15ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳು: ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಎಂಜಿನಿಯರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ, ಪೌರಾಡಳಿತ ನಿರ್ದೇಶನಾಲಯದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಗಳು ಸೇರಿದಂತೆ 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಉಳಿಕೆ ಮೂಲವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಏಪ್ರಿಲ್ 29ರಿಂದ ಮೇ 28ರವರೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೋಮಾ ಎಂಜಿನಿಯರಿಂಗ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು ಹಾಗೂ ಇನ್ನಿತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕೆಪಿಎಸ್ಸಿ ವೆಬ್ಸೈಟ್ಗೆ ಭೇಟಿ ನೀಡಬಹುದು.