ಬೆಂಗಳೂರು: ಶಾಲಾ ಮಕ್ಕಳಿಗೆ ಸಿಹಿಸುದ್ದಿಯನ್ನು ನೀಡಲು ಮುಂದಾಗಿದ್ದು, ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಅವರು ಉತ್ತರಿಸಿದರು. ಶಾಲಾ ಮಕ್ಕಳಿಗೆ ಯಾಕೆ ಸೈಕಲ್ ಕೊಡ್ತಿಲ್ಲ? ಬಿಜೆಪಿ ಸರ್ಕಾರ ಸೈಕಲ್ ನಿಲ್ಲಿಸಿತ್ತು ಒಪ್ಪುತ್ತೇನೆ? ಅದಕ್ಕೆ ಜನ ನಮ್ಮನ್ನ ಇಲ್ಲಿಗೆ ಕೂರಿಸಿದ್ದಾರೆ. ಆದರೇ, ಈ ಸರ್ಕಾರಕ್ಕೆ ಸೈಕಲ್ ಕೊಡಲು ಹಣದ ಕೊರತೆ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 2023-24ನೇ ಸಾಲಿನಲ್ಲಿ 55,43,828 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. 45,45,749 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೈಕಲ್ ಹಿಂದಿನ ಸರ್ಕಾರ ಕೊಡೋದು ನಿಲ್ಲಿಸಿದೆ. ನಾನು ಈಗಾಗಲೇ ಸಿಎಂ ಜೊತೆಗೆ ಮಾತಾಡಿದ್ದೇನೆ. ಮುಂದಿನ ವರ್ಷದಿಂದಲೇ 8ನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.