ಭಾರತ ಕೃಷಿ ಪ್ರಧಾನ ದೇಶ. ಕೃಷಿ ಇಂದಿಗೂ ದೇಶದ ಮುಖ್ಯ ಜೀವನಾಧಾರವಾಗಿದೆ. ಕಚ್ಚಾ ಸೆಣಬಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 6ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟದಿಂದ ಅನುಮೋದನೆ ದೊರಕುವ ಮೂಲಕ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಿಂದಿನ ವರ್ಷದಲ್ಲಿ ಸೆಣಬಿಗೆ ಎಂಎಸ್ಪಿ 5,335 ರೂ ಇತ್ತು.
ಕ್ವಿಂಟಾಲ್ಗೆ 315 ರೂ ಅಥವಾ ಶೇ. 6ರಷ್ಟು ಎಂಎಸ್ಪಿ ಏರಿಕೆ ಆಗಿದೆ. ಕೇಂದ್ರ ಸಂಪುಟದಲ್ಲಿ ಈ ಕ್ರಮಕ್ಕೆ ಇಂದು ಅನುಮೋದನೆ ಸಿಕ್ಕಿದೆ. ಕೇಂದ್ರ ಸಚಿವ ಪೀಯುಶ್ ಗೋಯಲ್ ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿಯನ್ನು ತಿಳಿಸಿದ್ದಾರೆ.
ಸೆಣಬು ಬೆಳೆಯಲು ಆಗುವ ಸರಾಸರಿ ವೆಚ್ಚಕ್ಕಿಂತ ಶೇ. 66.8ರಷ್ಟು ಹೆಚ್ಚು ಲಾಭ ರೈತರಿಗೆ ಸಿಗಲಿದೆ. ಸೆಣಬು ಬೆಳೆಗಾರರಿಗೆ ಆದಾಯ ಹೆಚ್ಚಳ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಸೆಣಬಿಗೆ ಬೆಂಬಲ ಬೆಲೆ ಸಾಕಷ್ಟು ಏರಿಕೆ ಆಗುತ್ತಾ ಬಂದಿದೆ. 2014-15ರಲ್ಲಿ ಒಂದು ಕ್ವಿಂಟಾಲ್ ಸೆಣಬಿಗೆ 2,400 ರೂ ಎಂಎಸ್ಪಿ ಇತ್ತು. ಹತ್ತು ವರ್ಷದಲ್ಲಿ 2.35 ಪಟ್ಟು ಹೆಚ್ಚು ಏರಿಕೆ ಮಾಡಲಾಗಿದೆ. ಕೇಂದ್ರ ಸಂಪುಟ ಎಂಎಸ್ಪಿ ಏರಿಕೆ ಜೊತೆಗೆ ಮತ್ತೊಂದು ನಡೆಗೂ ಅನುಮೋದನೆ ನೀಡಿದೆ. ರಾಷ್ಟ್ರೀಯ ಹೆಲ್ತ್ ಮಿಷನ್ ಅನ್ನು ಮತ್ತಷ್ಟು ಐದು ವರ್ಷಕ್ಕೆ ವಿಸ್ತರಿಸುವ ಕ್ರಮಕ್ಕೆ ಸಂಪುಟದ ಒಪ್ಪಿಗೆ ಸಿಕ್ಕಿದೆ.