ಪ್ರಸ್ತುತ ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟು ರಾಜ್ಯದ ರೈತರು ನಷ್ಟ ಅನುಭವಿಸಿದ್ದಾರೆ. ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿಗಳು ವಿಲೇವಾರಿ ಹಂತದಲ್ಲಿದ್ದು, ಇನ್ನು ಕೆಲವು ತಿಂಗಳ ಒಳಗಾಗಿ ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಸಧ್ಯ ಎರಡನೇ ಹಂಗಾಮಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮು ಆರಂಭವಾಗಿದ್ದು, ಆಯ್ದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಂರಕ್ಷಣೆ ಪೋರ್ಟಲ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತು ಕೃಷಿ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಹೇಳಿದ್ದಾರೆ.
ಈ ಯೋಜನೆಯಡಿ ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಜೋಳ, ಕಡಲೆ ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ (ಶೇಂಗಾ), ಭತ್ತ, ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ಬೆಳೆಗಳಾದ ಮುಸುಕಿನ ಜೋಳ, ಜೋಳ, ಹುರುಳಿ, ಸೂರ್ಯಕಾಂತಿ, ಕುಸುಮೆ , ಈರುಳ್ಳಿ, ಮತ್ತು ಬೇಸಿಗೆ ಹಂಗಾಮಿನ ಸೂರ್ಯಕಾಂತಿ ಈರುಳ್ಳಿ ಬಳ್ಳಾರಿ ಜಿಲ್ಲೆಯ ಬೆಳೆಗಳಾಗಿವೆ.
ಇತರೆ ಜಿಲ್ಲೆಯ ರೈತರು ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎಂದು ಮಾಹಿತಿ ತಿಳಿದುಕೊಳ್ಳಬಹುದು.
ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳನ್ನು ಸಹ ನಿಗದಿ ಮಾಡಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ ಡಿಸೆಂಬರ್ 30, ಜೋಳ ನವೆಂಬರ್ 15, ಮುಸುಕಿನ ಜೋಳ ಡಿಸೆಂಬರ್ 15, ಕಡಲೆ ಡಿಸೆಂಬರ್ 30, ಹುರುಳಿ ಡಿಸೆಂಬರ್ 1, ಸೂರ್ಯಕಾಂತಿ ಡಿಸೆಂಬರ್ 15 ಕೊನೆಯ ದಿನವಾಗಿದೆ. ಕುಸುಮೆ ಡಿಸೆಂಬರ್ 15, ಈರುಳ್ಳಿ ಡಿಸೆಂಬರ್ 1, ಬೇಸಿಗೆ ಬೆಳೆಗಳಾದ ಭತ್ತ 2024 ಫೆಬ್ರವರಿ 28, ನೆಲಗಡಲೆ (ಶೇಂಗಾ) 2024 ಫೆಬ್ರವರಿ 28, ಸೂರ್ಯಕಾಂತಿ 2024 ಫೆಬ್ರವರಿ 28 ಮತ್ತು ಈರುಳ್ಳಿ 2024 ಫೆಬ್ರವರಿ 28 ಕೊನೆಯ ದಿನವಾಗಿದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್ಗಳು/ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ರಾಜ್ಯ ಸರಕಾರದ ಸಂರಕ್ಷಣೆ ವೆಬ್ಸೈಟ್ https://samrakshane.karnataka.gov.in ಭೇಟಿ ಮಾಡಿ ಬೆಳೆ ವಿಮೆ ಅರ್ಜಿ ಮತ್ತು ಬೆಳೆ ವಿಮೆ ಪರಿಹಾರದ ಹಣ ವರ್ಗಾವಣೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ತಿಳಿಯವುದಾಗಿದೆ.