ಇತ್ತೀಚೆಗೆ ಹೆಚ್ಚಿನ ಜನರು 5ಜಿ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಒದಗಿಸುತ್ತಿವೆ. ಇದೀಗ ಈ ಸಾಲಿಗೆ ಗೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ಸಹ ಸೇರಿಕೊಳ್ಳಲಿದೆ. ಬಿಎಸ್ಎನ್ಎಲ್ 4ಜಿ ಮತ್ತು 5ಜಿ ಸೇವೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದು ಈ ಬಗ್ಗೆ ಬಿಎಸ್ಎನ್ಎಲ್ ಅಧಿಕೃತವಾಗಿ ಮಾಹಿತಿ ನೀಡಿದೆ.
ಈ ಬಗ್ಗೆ ಮಾತನಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್ಎನ್ಎಲ್ ಬಹುಶಃ ಮುಂದಿನ ವರ್ಷ ಅಂದ್ರೆ 2025ರಲ್ಲಿ ತನ್ನ 5ಜಿ ಸೇವೆಯನ್ನು ಪ್ರಾರಂಭಿಸುತ್ತದೆ. ಭಾರತೀಯ ಸಂಚಾರ ನಿಗಮ ಲಿಮಿಟೆಡ್ ತನ್ನ 5ಜಿ ರೇಡಿಯೋ ಆಕ್ಸೆಸ್ ನೆಟ್ವರ್ಕ್ (ಆರ್ಎಎನ್) ಮತ್ತು ಕೋರ್ ನೆಟ್ವರ್ಕ್ 3.6 GHz ಮತ್ತು 700 MHz ಫ್ರೀಕ್ವೆನ್ಸಿ ಬ್ಯಾಂಡ್ ಪರೀಕ್ಷೆ ಪೂರ್ಣಗೊಳಿಸಿದೆ. ಆದಷ್ಟು ಬೇಗ ದೇಶಾದ್ಯಂತ ಬಿಎಸ್ಎನ್ಎಲ್ನ 5ಜಿ ಸೇವೆಗಳು ಪ್ರಾರಂಭಗೊಳ್ಳಲಿವೆ ಎಂದಿದ್ದಾರೆ.
ಮಾಹಿತಿ ಪ್ರಕಾರ ಬಿಎಸ್ಎನ್ಎಲ್ ತನ್ನ 5ಜಿ ಸೇವೆಯನ್ನು ಮುಂದಿನ ವರ್ಷದ ಮಕರ ಸಂಕ್ರಾಂತಿಯೊಳಗೆ ಪ್ರಾರಂಭಿಸಬಹುದಾಗಿದೆ. ಮಾಧ್ಯಮಗೋಷ್ಟಿಯಲ್ಲಿ ಬಿಎಸ್ಎನ್ಎಲ್ ಪ್ರಧಾನ ವ್ಯವಸ್ಥಾಪಕ (ಕೃಷ್ಣ ಜಿಲ್ಲೆ) ಎಲ್ ಶ್ರೀನು ಮಾತನಾಡಿ, ಕಂಪನಿಯು ಟವರ್ಗಳು ಮತ್ತು ಇತರ ಉಪಕರಣಗಳನ್ನು ಅಪ್ಡೇಟ್ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಎಸ್ಎನ್ಎಲ್ ‘ಸರ್ವತ್ರ ವೈಫೈ’ ಎಂಬ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಇದರಿಂದ ಬಿಎಸ್ಎನ್ಎಲ್ ಗ್ರಾಹಕರು ಯಾವುದಾದ್ರು ಹೊಸ ಸ್ಥಳಕ್ಕೆ ಹೋದಾಗ ಅಲ್ಲಿರುವ ವೈಫೈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ಡೆಪ್ಯುಟಿ ಜನರಲ್ ಮ್ಯಾನೇಜರ್ಗಳ ತಂಡವು ಮುನ್ನಡೆಸುತ್ತಿದೆ. ವಿವಿಧ ಕಂಪನಿಗಳ ಸುಂಕದ ಬೆಲೆ ಏರಿಕೆ ಕುರಿತು ಉಪ ಪ್ರಧಾನ ವ್ಯವಸ್ಥಾಪಕ ಜಿ. ಶ್ರೀನಿವಾಸ್ ಮಾತನಾಡಿ, ಕಳೆದ ಕೆಲವು ದಿನಗಳಲ್ಲಿ ಸುಮಾರು 12 ಸಾವಿರ ಗ್ರಾಹಕರು ನಂಬರ್ ಪೋರ್ಟಬಿಲಿಟಿ ಮೂಲಕ ಬಿಎಸ್ಎನ್ಎಲ್ಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದರು.
ಮಾಹಿತಿಯ ಪ್ರಕಾರ, ಪ್ರಸ್ತುತ ಬಿಎಸ್ಎನ್ಎಲ್ ಕಂಪನಿ ದೇಶಾದ್ಯಂತ 4ಜಿ ಸೈಟ್ಗಳನ್ನು ಸ್ಥಾಪಿಸುತ್ತಿದೆ. ಈ ಸೈಟ್ಗಳನ್ನು 2025 ರ ವೇಳೆಗೆ 5ಜಿ ಆಗಿ ಅಪ್ಗ್ರೇಡ್ ಮಾಡಲಾಗುತ್ತದೆ. ಬಿಎಸ್ಎನ್ಎಲ್ 2025 ರ ಮಧ್ಯದಲ್ಲಿ ಒಂದು ಲಕ್ಷ್ ಸೈಟ್ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಅದರಲ್ಲಿ ಇದುವರೆಗೆ ಒಟ್ಟು 39 ಸಾವಿರ ಸೈಟ್ಗಳನ್ನು ಸ್ಥಾಪಿಸಲಾಗಿದೆ. ಬಿಎಸ್ಎನ್ಎಲ್ ದೇಶೀಯ 4ಜಿ ಮತ್ತು 5ಜಿ ಎರಡನ್ನೂ ಅಳವಡಿಸುವ ದೇಶದ ಮೊದಲ ಆಪರೇಟರ್ ಆಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಸದ್ಯ ಬಿಎಸ್ಎನ್ಎಲ್ನ ಈ ಸೇವೆ ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು ಸದ್ಯದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ.