ಮೈಸೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮೈಸೂರಿನ ರಾಜಮನೆತನ ವಿರೋಧ ವ್ಯಕ್ತಪಡಿಸಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯರನ್ನು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಬೆಟ್ಟಕ್ಕೆ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲ ಆಗಬೇಕಾದರೆ ಒಂದು ಪ್ರಾಧಿಕಾರ ಬೇಕೇ ಬೇಕು. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಅವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ ಎಂದು ಹೇಳಿದರು.
ಆಸ್ತಿ ಗಲಾಟೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ಹೇಳುವ ಮೂಲಕ ಚಾಮುಂಡಿ ಬೆಟ್ಟದ ಪ್ರಾಧಿಕಾರ ಪರ ಬ್ಯಾಟಿಂಗ್ ಮಾಡಿದರು.
ಅಮೃತ್ ಯೋಜನೆ ಕುಡಿಯುವ ನೀರು ಬೆಟ್ಟಕ್ಕೆ ತಲುಪದೇ ಇರಲು ಕಾರಣ ಯಾರು? ನಾನು ಹೇಳಿದರೆ ವಿವಾದ ಆಗುತ್ತದೆ. ಪೈಪ್ಲೈನ್ ಎಲ್ಲಿ ತಡೆದು ನಿಂತಿದೆ? ನೀವೇ ಹೋಗಿ ಹುಡುಕಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಂಸದ ಯದುವೀರ್ ಒಡೆಯರ್ಗೆ ಪ್ರತಾಪ್ ಸಿಂಹ ಟಾಂಗ್ ನೀಡಿದರು.