ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಅವರನ್ನು ಏಕಾಏಕಿ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಸುರೇಶ್ ಮನೆಯಲ್ಲಿ ತುರ್ತು ಪರಿಸ್ಥಿತಿ ಇದ್ದ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು ಎಂದು ಆದೇಶಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಹೋದ ಗೋಲ್ಡ್ ಸುರೇಶ್ ಅವರಿಗೆ ಕಿಚ್ಚ ಸುದೀಪ್ ಮುಖ್ಯವಾದ ಸಂದೇಶವೊಂದನ್ನು ನೀಡಲಾಗಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಆಟದಿಂದ ಯಾರೇ ಎಲಿಮಿನೇಟ್ ಆದರೂ ಅವರನ್ನು ವೇದಿಕೆಗೆ ಕರೆದು ಸುದೀಪ್ ಮಾತನಾಡಿಸುತ್ತಾರೆ. ಆದರೆ ಈ ರೀತಿ ಅನಿವಾರ್ಯ ಕಾರಣಗಳಿಂದ ಮನೆ ಬಿಟ್ಟು ತೆರಳಬೇಕಾದ ಸಂದರ್ಭ ಬಂದರೆ ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವ ಅವಕಾಶ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಗೋಲ್ಡ್ ಸುರೇಶ್ ಕೂಡ ಅಂಥ ಚಾನ್ಸ್ ಮಿಸ್ ಮಾಡಿಕೊಂಡು ದೊಡ್ಮನೆಯಿಂದ ಹೊರ ಹೋಗಿದ್ದಾರೆ.
ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಅವರು ಕೂಡಲೇ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬರಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು. ಅದೇ ವೇಳೆ ಮನೆಯೊಳಗಿನ ಟಿವಿಯಲ್ಲಿ ಸುದೀಪ್ ಅವರ ಸಂದೇಶ ಬಿತ್ತರ ಆಯಿತು.
‘ಮನೆಯಿಂದ ಎಮರ್ಜೆನ್ಸಿ ಇದ್ದರೆ ನಿಮಗೆ ಆ ಸಂದೇಶ ತಲುಪಿಸುತ್ತೇವೆ ಎಂದು ಹೇಳಿದ್ದೆವು. ನೀವು ಗಾಬರಿ ಆಗುವಂಥದ್ದು ಏನೂ ಇಲ್ಲ. ಆದರೆ ಈಗ ನೀವು ಮನೆಗೆ ತೆರಳಬೇಕು. ಸುರೇಶ್ ಅವರು ಸೋತು ಹೋಗುತ್ತಿಲ್ಲ. ಕ್ಯಾಪ್ಟನ್ ಆಗಿ ಗೆದ್ದು ಹೋಗುತ್ತಿದ್ದಾರೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಕಷ್ಟಪಟ್ಟು ಆಟ ಆಡಿ ಸುರೇಶ್ ಅವರು ಈ ವಾರ ಕ್ಯಾಪ್ಟನ್ ಆಗಿದ್ದರು. ಆದರೆ ಅರ್ಧಕ್ಕೆ ಶೋನಿಂದ ಹೊರಗೆ ಬಂದಿದ್ದರಿಂದ ಅವರ ಶ್ರಮ ವ್ಯರ್ಥ ಆದಂತೆ ಆಗಿದೆ.
ನಿಜಕ್ಕೂ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ಏನು ಸಮಸ್ಯೆ ಆಗಿರಬಹುದು ಎಂಬುದನ್ನು ತಿಳಿಸಿಲ್ಲ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲರಿಗೂ ಚಿಂತೆ ಆಗಿದೆ. ಏನೋ ಬಿಸ್ನೆಸ್ ಕುರಿತ ಸಮಸ್ಯೆ ಇರಬಹುದು ಎಂದು ಐಶ್ವರ್ಯಾ ಅವರು ಊಹಿಸಿದ್ದಾರೆ. ಸುರೇಶ್ ತಂದೆಗೆ ಸಮಸ್ಯೆ ಆಗಿದೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಆದರೆ ಅಂಥ ಸಮಸ್ಯೆ ಏನೂ ಆಗಿಲ್ಲ ಎಂಬ ಸ್ಪಷ್ಟನೆ ಕೂಡ ಸಿಕ್ಕಿದೆ. ಗೋಲ್ಡ್ ಸುರೇಶ್ ಹೊರ ಹೋಗಿದ್ದು ಯಾಕೆ ಅನ್ನೋದು ಇದುವರೆಗೂ ರಿವೀಲ್ ಆಗಿಲ್ಲ.