ಹುಬ್ಬಳ್ಳಿ: ನೆಚ್ಚಿನ ಎತ್ತುಗಳಿಗೆ ಚಿನ್ನಾಭರಣ ತೊಡಿಸುವ ಮೂಲಕ ಅನ್ನದಾತ, ತನ್ನೊಂದಿಗೆ ದುಡಿಯುವ ಎತ್ತುಗಳ ಮೇಲಿನ ಪ್ರೇಮವನ್ನು ತೋರಿಸಿದ್ದಾನೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ರೈತ ಈರಪ್ಪ ಅರಳಿಕಟ್ಟಿ ಅವರ ಎತ್ತುಗಳ ಜೊತೆಗಿನ ನಂಟಿನ ಕಥೆ..
ಎತ್ತುಗಳಿಗೆ ಬಂಗಾರ, ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡುವ ಮೂಲಕ ಅನ್ನದಾತ ತನ್ನ ಒಡನಾಡಿಯ ಬಗ್ಗೆ ಬಹಳಷ್ಟು ಪ್ರೀತಿ ಹೊಂದಿದ್ದಾನೆ. ಹೌದು.. ಬಡತನದಲ್ಲಿ ಹುಟ್ಟಿದ ವ್ಯಕ್ತಿ ನೆಚ್ಚಿನ ಎತ್ತುಗಳಿಗೆ ಲಕ್ಷಗಟ್ಟಲೇ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣ ತೊಡಿಸಿ ಉಳವಿ ಜಾತ್ರೆಗೆ ಹೋಗಿ ಸಂಭ್ರಮಿಸುತ್ತಿದ್ದಾನೆ. ಬಸ್ಸಿನಲ್ಲಿ ಉಳವಿ ಜಾತ್ರೆಗೆ ಹೋಗಿ ಬರುತ್ತಿದ್ದ ಈರಪ್ಪ ಅಲ್ಲಿನ ಚಕ್ಕಡಿಗಳನ್ನು ನೋಡಿ ತಾನೂ ಚಕ್ಕಡಿಯೊಂದಿಗೆ ಉಳವಿಗೆ ಬರುವ ಸಂಕಲ್ಪ ಮಾಡಿಕೊಂಡಿದ್ದ. ಕಳೆದ 18 ವರ್ಷದಿಂದ ಇವರು ತಮ್ಮ ಚಕ್ಕಡಿ ತೆಗೆದುಕೊಂಡು ಹೋಗುತ್ತಿದ್ದಾರೆ.
ತಾವು ತೆಗೆದುಕೊಂಡು ಹೋಗುವ ಎತ್ತುಗಳಿಗೆ ಅರ್ಧ ಕೆಜಿ ಬೆಳ್ಳಿಯಲ್ಲಿ 4 ಕಡಗ, 15 ತೊಲೆ ಬೆಳ್ಳಿಯಲ್ಲಿ 4 ಕೊಂಬೆಣಸು ಹಾಗೂ ಎತ್ತಿನ ಕೋಡುಗಳಿಗೆ 21 ತೊಲೆಯಲ್ಲಿ 4 ಚಿನ್ನದ ಕೊಂಬೆಣಸು ಮಾಡಿಸಿದ ರೈತ, ಅವುಗಳನ್ನು ಹಾಕಿಕೊಂಡು ಅದ್ದೂರಿಯಾಗಿ ಉಳವಿ ಜಾತ್ರೆಗೆ ತೆರಳುವ ಸಂಭ್ರಮ ಕಣ್ಣಿಗೆ ಹಬ್ಬದಂತಿದೆ.