ಮಾರುಕಟ್ಟೆಯಲ್ಲಿ ಮೇಕೆ ಹಾಲಿಗೆ ಭಾರೀ ಡಿಮ್ಯಾಂಡ್ ಬಂದು ಬಹಳ ವರ್ಷಗಳೇ ಕಳೆಯಿತು. ಆದರೂ ಈ ಹಾಲಿನ ಬಗ್ಗೆ ಆರೋಗ್ಯದ ಪ್ರಯೋಜನಗಳು ಬಹುತೇಕರಿಗೆ ತಿಳಿದಿಲ್ಲ. ಕೊಳ್ಳಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಒಮ್ಮೆ ಹಸುವಿನ ಹಾಲಿನ ಜೊತೆಗೆ ಮೇಕೆ ಹಾಲಿನ ಈ ಪ್ರಯೋಜನಗಳನ್ನು ತಿಳಿಯುವುದು ಒಳಿತು.
ಎದೆ ಹಾಲಿನಂತೆ ಮೇಕೆ ಹಾಲು ಆರೋಗ್ಯಕರ
ನವಜಾತ ಶಿಶುವಿಗೆ ಮೇಕೆ ಹಾಲು ಎದೆ ಹಾಲಿನಷ್ಟೇ ಆರೋಗ್ಯಕರ ಎಂದು ಡಾ ರೇಖಾ ರಾಧಾಮಣಿ ಅಭಿಪ್ರಾಯವಾಗಿದೆ. ಮೇಕೆ ಹಾಲು ತಾಯಿಯ ಹಾಲಿಗೆ ಉತ್ತಮ ಪರ್ಯಾಯ ಹಾಲು ಆಗಿದೆ ಎಂಬುದು ಅವರ ಮಾತು. ಇದು ಶಿಶುಗಳು ಮತ್ತು ಮಕ್ಕಳಲ್ಲಿ ಅತಿಸಾರ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಳೆ ಬಲಪಡಿಸುತ್ತದೆ
400 ಮಿಲಿ ಮೇಕೆ ಹಾಲು ಮೂಳೆ, ಚಯಾಪಚಯ ಕ್ರಿಯೆ(ಮೆಟಬಾಲಿಕ್) ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ. ಸಂಧಿವಾತ ಇರುವ ವ್ಯಕ್ತಿಗಳಲ್ಲಿ ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಮೇಕೆ ಹಾಲು ಸಹಾಯ ಮಾಡುತ್ತದೆ.
ಸುಲಭವಾಗಿ ಜೀರ್ಣವಾಗುತ್ತದೆ
ಮೇಕೆ ಹಾಲಿನಲ್ಲಿರುವ ಫ್ಯಾಟ್ ಗ್ಲೋಬಲ್ಗಳು ಚಿಕ್ಕದಾಗಿರುತ್ತವೆ . ಆದ್ದರಿಂದ ಮೇಕೆ ಹಾಲು ಜೀರ್ಣಕ್ರಿಯೆಗೆ ಸುಲಭವಾಗಿದೆ. ವರದಿಗಳ ಪ್ರಕಾರ ಕರುಳಿನ ತೊಂದರೆಯಾದರೆ ಚಿಕಿತ್ಸೆಗೆ ಮೇಕೆ ಹಾಲನ್ನು ಉಪಯೋಗಿಸಲಾಗುತ್ತದೆ. ಹಸುವಿನ ಹಾಲಿಗಿಂತ ಮೇಕೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಆದರೂ ಎರಡೂ ಒಂದೇ ಪ್ರಮಾಣದ ಲ್ಯಾಕ್ಟೋಸ್ ಹೊಂದಿರುತ್ತವೆ. ಕೆಲವರು ಮೇಕೆ ಹಾಲಿನಲ್ಲಿ ಲ್ಯಾಕ್ಟೋಸ್ ಕಡಿಮೆ ಇದೆ ಎಂದು ನಂಬುತ್ತಾರೆ. ಆದರೆ ಇದು ನಿಜವಲ್ಲ. ಲ್ಯಾಕ್ಟೋಸ್ ಅಲರ್ಜಿ ಹೊಂದಿದ್ದರೆ ಮೇಕೆ ಹಾಲು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಕೇಳುವುದು ಒಳ್ಳೆಯದು.
ಉರಿಯೂತದ ವಿರುದ್ಧ ಹೋರಾಡುತ್ತದೆ
ಅಲರ್ಜಿ ಮತ್ತು ಉರಿಯೂತ ಇರುವವರಿಗೆ ಮೇಕೆ ಹಾಲನ್ನು (ಕತ್ತೆ ಹಾಲು ಸಹ ) ಫುಡ್ ಸಪ್ಲಿಮೆಂಟ್ ಆಗಿ ಶಿಫಾರಸ್ಸು ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ತಿಳಿದುಬಂದಿದೆ.
ಹೃದಯ ಆರೋಗ್ಯವಾಗಿರಲು
ಮೇಕೆ ಹಾಲಿನಲ್ಲಿ ಮೆಗ್ನೀಶಿಯಂ ಇದೆ. ಇದು ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನಿಯಮಿತ ಹೃದಯ ಬಡಿತ ಕಾಪಾಡಿಕೊಳ್ಳಲು ಮತ್ತು ರಕ್ತ ಹೆಪ್ಪುಗಟ್ಟುವಿಕೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದನ್ನು ತಡೆಯುತ್ತದೆ. ಮೆಗ್ನೀಶಿಯಮ್ ವಿಟಮಿನ್ ಡಿ ಯೊಂದಿಗೆ ಸಹ ಕಾರ್ಯ ನಿರ್ವಹಿಸಲಿದ್ದು, ಇದು ಹೃದಯದ ಆರೋಗ್ಯಕ್ಕೆ ಬೇಕಾದ ಮತ್ತೊಂದು ಪೋಷಕಾಂಶವಾಗಿದೆ. ಮೇಕೆ ಹಾಲಿನಲ್ಲಿ ಹಸುವಿನ ಹಾಲು ಅಥವಾ ಎಮ್ಮೆ ಹಾಲಿಗಿಂತ ಹೆಚ್ಚಿನ ಮೆಗ್ನೀಶಿಯಮ್ ಇರುವುದು ತಿಳಿದುಬಂದಿದೆ. ಆದರೆ ಎಮ್ಮೆ ಹಾಲಿಗೆ ಹೋಲಿಸಿದರೆ ಕೆಲವು ಸ್ಥಳೀಯ ಮೇಕೆ ಹಾಲಿನಲ್ಲಿ ಕಡಿಮೆ ಕ್ಯಾಲ್ಸಿಯಂ ಇರುವುದು ಕಂಡುಬಂದಿದೆ.
ಶಿಶುಗಳಿಗೂ ಕೊಡುತ್ತಾರೆ
ಮೇಕೆ ಹಾಲು ಅತ್ಯುತ್ತಮ ಮೆಟಬಾಲಿಕ್ ಏಜೆಂಟ್ ಆಗಿದೆ. ಇದು ಎ 2 ಬೀಟಾ-ಕ್ಯಾಸೀನ್ ಹೊಂದಿದ್ದು, ಇದು ಹಸುವಿನ ಹಾಲಿನಲ್ಲಿರುವ ಎ 1 ಬೀಟಾ-ಕ್ಯಾಸೀನ್ ಗಿಂತ ಹೆಚ್ಚು ಆರೋಗ್ಯಕರವಾಗಿದೆ. ಎ 2 ಬೀಟಾ-ಕ್ಯಾಸೀನ್ ಅನ್ನು ಬೀಟಾ-ಕ್ಯಾಸೀನ್ನ ಸುರಕ್ಷಿತ ರೂಪಾಂತರವೆಂದು ಪರಿಗಣಿಸಲಾಗುತ್ತದೆ. ಮೇಕೆ ಹಾಲು ಹಸುವಿನ ಹಾಲಿಗಿಂತ ಕಡಿಮೆ ಅಲರ್ಜಿ ಹೊಂದಿರುವುದು ಕಂಡುಬಂದಿದ್ದು, ಶಿಶುಗಳ ಪೋಷಣೆಗೆ ಹಸುವಿನ ಹಾಲಿಗೆ ಪರ್ಯಾಯವಾಗಿ ಮೇಕೆ ಹಾಲು ಕೊಡಲಾಗುತ್ತದೆ. ಆದರೆ ಇದನ್ನು ಸ್ಪಷ್ಟಪಡಿಸಲು ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ.
ಆತಂಕ ನಿವಾರಣೆಗೆ
ಮೇಕೆ ಹಾಲು ಮೆದುಳಿನ ಬೆಳವಣಿಗೆಯ ಮೇಲೆ (ದೈಹಿಕ ಬೆಳವಣಿಗೆಯ ಮೇಲೂ) ಪ್ರಭಾವ ಬೀರಬಹುದು ಎಂದು ಇಲಿಗಳ ಮೇಲೆ ನಡೆಸಿದ ಅಧ್ಯಯನಗಳು ತೋರಿಸಿವೆ. ಈ ಅಧ್ಯಯನಗಳಲ್ಲಿ ಆತಂಕ ಕಡಿಮೆ ಮಾಡಲು ಮೇಕೆ ಹಾಲು ಸಹಕಾರಿ ಎಂಬ ಅಂಶ ತಿಳಿದುಬಂದಿದೆ.
ಕಬ್ಬಿಣದ ಅಂಶ ಹೆಚ್ಚು
ಹಸುವಿನ ಹಾಲಿಗಿಂತ ಮೇಕೆ ಹಾಲಿನಲ್ಲಿ ಕಬ್ಬಿಣದ ಅಂಶ ಉತ್ತಮವಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಈ ಹಾಲನ್ನು ನಿಯಮಿತವಾಗಿ ಕುಡಿದವರ ದೇಹದಲ್ಲಿ ಹಿಮೊಗ್ಲೋಬಿನ್ ಮಟ್ಟ ಹೆಚ್ಚಾಗಿದೆ. ಜಾಹೀರಾತುಗಳಲ್ಲಿ ಮೇಕೆ ಹಾಲು ಹೆಚ್ಚಾಗಿ ಕಾಣಿಸದಿದ್ದರೂ, ಇದು ಆರೋಗ್ಯಕರ ಹಾಲು ಎಂಬುದು ನೆನಪಿರಲಿ.
ಮೆದುಳಿನ ಆರೋಗ್ಯ
ಮೇಕೆ ಹಾಲಿನಲ್ಲಿರುವ ಲಿಪಿಡ್ಗಳು ಆತಂಕ ಕಡಿಮೆ ಮಾಡುವ ಗುಣ ಹೊಂದಿವೆ. ಇನ್ನು ಕಾಂಜುಗೇಟೆಡ್ ಲಿನೋಲಿಕ್ ಆ್ಯಸಿಡ್ ಮೆದುಳಿನ ಬೆಳವಣಿಗೆ ಹೆಚ್ಚಿಸುತ್ತದೆ. ಇದರಲ್ಲಿ ಐರನ್ ಕೂಡಾ ಅಧಿಕವಾಗಿದ್ದು, ಅನೀಮಿಯಾ ತಡೆಗಟ್ಟುತ್ತದೆ.
ಯಾವ ಹಾಲು ಉತ್ತಮ?
ಪ್ರತಿಯೊಬ್ಬರೂ ಹಸುವಿನ ಹಾಲು ಸೇವಿಸಿ ಬೆಳೆದಿದ್ದೇವೆ. ಆದರೂ ಮೇಕೆ ಹಾಲನ್ನೂ ಪರ್ಯಾಯವಾಗಿ ಉಪಯೋಗಿಸಲು ಹಿಂದಿರುವ ಕಾರಣಗಳೇನು ಎಂಬ ಬಗ್ಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿರಬೇಕು ಅಲ್ಲವೇ?. ಎರಡೂ ರೀತಿಯ ಹಾಲು ಒಂದೇ ರೀತಿಯ ಲ್ಯಾಕ್ಟೋಸ್ ಹೊಂದಿರುತ್ತದೆ.
100 ಗ್ರಾಂ ಮೇಕೆ ಹಾಲಿನಲ್ಲಿ 4.1 ಗ್ರಾಂ ಲ್ಯಾಕ್ಟೋಸ್ ಇದ್ದರೆ, ಅದೇ ಪ್ರಮಾಣ 4.6 ಗ್ರಾಂ ಲ್ಯಾಕ್ಟೋಸ್ ಹಸುವಿನ ಹಾಲಿನಲ್ಲಿ ಇದೆ. ಆದರೆ ಮೇಕೆ ಹಾಲು ಆಹಾರದಿಂದ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳುವ ಮೂಲಕ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ.