ದಾನಗಳಲ್ಲಿ ರಕ್ತದಾನವನ್ನು ಸಹ ಬಹಳ ಶ್ರೇಷ್ಠ ದಾನವೆಂದು ಕರೆಯಲಾಗುತ್ತಾದೆ. ಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್ನೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ.
ಜೂನ್ 14ರಂದೇ ಆಚರಣೆ ಯಾಕೆ ?
ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ಇದಲ್ಲದೆ, ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್ಸ್ಟೇನರ್ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿಅಕ್ಟೋಬರ್ 1 ಅನ್ನು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ರಕ್ತದಾನಿಗಳ ದಿನದ ಥೀಮ್
ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಒಂದೊಂದು ಥೀಮ್ ಇಟ್ಟುಕೊಂಡು ಆಚರಣೆ ಮಾಡಲಾಗುತ್ತದೆ. ಈ ವರ್ಷ ‘ಇತರಿಗಾಗಿ ಬದುಕಿ, ರಕ್ತ ನೀಡಿ, ಜೀವವನ್ನೇ ಹಂಚಿಕೊಳ್ಳಿ’ ಎಂಬ ಸಂದೇಶದೊಂದಿಗೆ ಈ ದಿನವನ್ನು ಆಚರಿಸುಲಾಗುತ್ತಿದೆ. ಕ್ಯಾನ್ಸರ್, ಹೃದಯಸಂಬಂಧಿ ಸಮಸ್ಯೆಗಳು, ಅಪಘಾತ, ಹೆರಿಗೆ ಸಂಬಂಧಿ ಚಿಕಿತ್ಸೆ ವೇಳೆ ವ್ಯಾಪಕವಾಗಿ ರಕ್ತ ಬೇಕಾಗುತ್ತದೆ. ಆದರೆ ಭಾರತವೂ ಸೇರಿದಂತೆ ಇಡೀ ಪ್ರಪಂಚದಲ್ಲಿ ಬೇಡಿಕೆಗೆ ತಕ್ಕಂತೆ ರಕ್ತದ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬದಕುವ ಎಲ್ಲ ಅವಕಾಶಗಳಿದ್ದರೂ ಎಷ್ಟೋ ಜನರು ರಕ್ತದ ಕೊರತೆಯಿಂದಾಗಿ ಮೃತಪಡುತ್ತಿದ್ದಾರೆ. ಈ ಹಿನ್ನಲೆಯಲ್ಲೆ ವಿಶ್ವದ ಎಲ್ಲಾ ರಾಷ್ಟ್ರಗಳ ಸರ್ಕಾರಗಳು, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿವೆ.
ಭಾರತದಲ್ಲಿ ಪ್ರತಿ ವರ್ಷ ಬೇಕಾಗುತ್ತೇ 5 ಕೋಟಿ ಯೂನಿಟ್ ರಕ್ತ
ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಬೇಕಾಗುತ್ತದೆ. ಆದರೆ, ಕೇವಲ 2.5 ಕೋಟಿ ಯೂನಿಟ್ ಮಾತ್ರ ರಕ್ತ ಲಭ್ಯವಾಗುತ್ತದೆ. ರಕ್ತದಾನವೆಂದರೆ ಅದು ಜೀವದಾನ. ಇದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ದೇಶದಲ್ಲಿ ಪ್ರತಿ 2 ಸೆಕೆಂಡ್ಗೆ ಯಾರಿಗಾದರೂ ರಕ್ತದ ಅಗತ್ಯ ಬಿದ್ದೇ ಬೀಳುತ್ತದೆ. ಪ್ರತಿ ವರ್ಷ ಅಂದಾಜು 3 ಕೋಟಿ ರಕ್ತದ ಘಟಕಗಳನ್ನು ಪೂರಣ ಮಾಡಲಾಗುತ್ತದೆ. ರಕ್ತಪೂರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗಳಿಂದ ಹೆಚ್ಚಾಗಿ ಬೇಡಿಕೆ ಬರುವುದು ಒ ಗುಂಪಿನ ರಕ್ತಕ್ಕೆ ಸಿಕ್ಲ್ ಸೆಲ್ ರೋಗಿ(ರಕ್ತಕ್ಕೆ ಸಂಬಂಧಿಸಿದ ಕಾಯಿಲೆ)ಗಳಿಗೆ ಅವರ ಜೀವನಪರ್ಯಂತ ರಕ್ತಪೂರಣ ಮಾಡಲೇಬೇಕು. ಪ್ರತಿ ವರ್ಷ ಭಾರತದಲ್ಲಿಅಂದಾಜು 10 ಲಕ್ಷ ಜನರಿಗೆ ಕ್ಯಾನ್ಸರ್ ಪತ್ತೆಯಾಗುತ್ತದೆ. ಈ ಜನರ ಪೈಕಿ ಹೆಚ್ಚಿನವರಿಗೆ ಕೆಲವೊಮ್ಮೆ ಆಗಾಗ, ದಿನನಿತ್ಯ, ಕಿವೋಥೆರಪಿ ಮಾಡುವಾಗ ರಕ್ತಪೂರಣ ಮಾಡಲೇಬೇಕಾಗುತ್ತದೆ.
ವಿಶ್ವ ರಕ್ತದಾನಿಗಳ ದಿನದ ಮಹತ್ವ
ಪ್ರತಿ ವರ್ಷ ರಕ್ತ ದಾನಿಗಳ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಬಗ್ಗೆ ಜಾಗರತಿ ಮೂಡಿಸುವುದು. ಈ ದಿನವನ್ನು ಆಚರಣೆ ಮಾಡುವ ಮೂಲಕ ರಕ್ತ ದಾನಿಗಳಿಗೆ ಕರತಜ್ಞತೆ ಸಲ್ಲಿಸುವುದು ವಿಶ್ವ ರಕ್ತದಾನಿಗಳ ಉದ್ದೇಶವಾಗಿದೆ. ಇದರ ಜೊತೆ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ನೋಡಿಕೊಳ್ಳುವುದಾಗಿದೆ. ರಕ್ತ ದಾನಿಗಳಿಂದ ಪ್ರತಿ ವರ್ಷ ಕೋಟ್ಯಂತರ ಜನರು ತಮ್ಮ ಜೀವವನ್ನ ಉಳಿಸಿಕೊಂಡಿದ್ದಾರೆ.
ರಕ್ತದಾನವನ್ನ ಯಾರು ಮಾಡಬಹುದು?
18ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ಯಾರು ಬೇಕಾದರೂ ರಕ್ತದಾನ ಮಾಡಬಹುದು. ದಾನಿಗಳ ದೇಹದ ತೂಕ 45 ಕೆ.ಜಿ. ಮೇಲ್ಪಟ್ಟಿದ್ದು, ಹಿಮೋಗ್ಲೋಬಿನ್ ಅಂಶ 12.5 ಗ್ರಾಮ್ಗಿಂತ ಹೆಚ್ಚಿರಬೇಕು. ರಕ್ತದ ಒತ್ತಡ ಸಾಮಾನ್ಯವಾಗಿರಬೇಕು. ಅಂದರೆ ಸಿಸ್ಟೋಲಿಕ್ ರಕ್ತದ ಒತ್ತಡ 100 ರಿಂದ 140 ಹಾಗೂ ಡಯಾಸ್ಟೊಲಿಕ್ ಒತ್ತಡ 70 ರಿಂದ 100 ಇರಬೇಕು. 45 ರಿಂದ 60 ಕೆ.ಜಿ. ತೂಕದ ದಾನಿಗಳಿಂದ 350 ಎಂಎಲ್ ರಕ್ತವನ್ನು ಹಾಗೂ 60 ಕೆ.ಜಿ.ಗೂ ಹೆಚ್ಚು ತೂಕ ಹೊಂದಿರುವ ದಾನಿಗಳಿಂದ 450 ಎಂಎಲ್ ರಕ್ತವನ್ನು ದಾನವಾಗಿ ಪಡೆಯಲಾಗುವುದು.
ರಕ್ತದಾನವನ್ನ ಯಾರು ಮಾಡಬಾರದು?
ಅನಾರೋಗ್ಯ ಪೀಡಿತರು, ನಿರಂತರ ಔಷಧ ಸೇವಿಸುವರು. ಎಚ್ಐವಿ/ಏಡ್ಸ್ ಸೋಂಕಿತರು, ಕ್ಯಾನ್ಸರ್ ರೋಗಿಗಳು, ಸಾಂಕ್ರಾಮಿಕ ರೋಗ ಹೊಂದಿರುವವರು, ಹೃದ್ರೋಗಿಗಳು, ಕ್ಷಯ ರೋಗಿಗಳು, ಲಿವರ್ ಮತ್ತು ಕಿಡ್ನಿ ಸಮಸ್ಯೆ ಹೊಂದಿರುವವರು, ಮಧುಮೇಹಿಗಳು, ಹೆಪಟೈಟಿಸ್ ‘ಬಿ’ ಸೋಂಕಿತರು, ಮಾದಕ ವ್ಯಸನಿಗಳು, ಕಡಿಮೆ ತೂಕ ಹಾಗೂ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ರಕ್ತದಾನ ಮಾಡುವಂತಿಲ್ಲ.
ರಕ್ತದಾನದ ಉಪಯೋಗಗಳು
ದಾನಿಗಳು ಒಮ್ಮೆ ರಕ್ತ ದಾನ ಮಾಡಿದರೆ ಮುಂದಿನ ಮೂರು ತಿಂಗಳವರೆಗೆ ದಾನ ಮಾಡಬಾರದು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗುತ್ತದೆ. ಅಲ್ಲದೆ ಉತ್ತಮ ಆರೋಗ್ಯ ಹೊಂದಬಹುದು. ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂತಹ ರೋಗಗಳನ್ನು ತಡೆಯಲು ಕೂಡ ರಕ್ತದಾನ ಸಹಕಾರಿಯಾಗಲಿದೆ.