ಹುಬ್ಬಳ್ಳಿ: ಸಂತೋಷ ಲಾಡ್ ಅವರೇ ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನಂತರ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೋದಿಯವರನ್ನು ಬದಲಾಯಿಸುವ ಚರ್ಚೆ ನಡೆದಿದೆ ಎಂಬ ಸಂತೋಷ್ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ಕಾಂಗ್ರೆಸ್ ನವರಿಗೆ ಮುಸ್ಲಿಂ, ಅಲ್ಪಸಂಖ್ಯಾತರನ್ನು ಬಿಟ್ಟರೇ ಬೇರೆ ಗೊತ್ತಿಲ್ಲ. ದೆಹಲಿಯ ಎಕ್ಸಿಟ್ ಪೋಲ್ ಏನಾಗಿದೆ ಅಂತ ಎಲ್ಲರಿಗೂ ಗೊತ್ತು ಎಂದರು.
ದೆಹಲಿಯಲ್ಲಿ ಕಾಂಗ್ರೆಸ್ ಗೆ ಒಂದು ಅಥವಾ ಎರಡು ಸೀಟು ಬಂದರೆ ದೊಡ್ಡ ಮಾತು. ಮೋದಿ ಬದಲಾವಣೆಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ ನೀವು ಮೊದಲು ರಾಹುಲ್ ಗಾಂಧಿಯನ್ನು ಬದಲಾಯಿಸಿ. ಆಗಲಾದರೂ ಕಾಂಗ್ರೆಸ್ ಸುಧಾರಿಸುತ್ತದೆ. ಮೋದಿ ಯಂತಹ ದೊಡ್ಡ ವ್ಯಕ್ತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುವುದು ಸರಿಯಲ್ಲ. ಮೋದಿ ಬದಲಾವಣೆ ಬಗ್ಗೆ ಯಾರು ಮಾತನಾಡಿದ್ದಾರೆ ಅಂತ ಬಹಿರಂಗಪಡಿಸಲಿ. ಎಲ್ಲಿ ಚರ್ಚೆ ನಡೆದಿದೆ ಅಂತ ಬಹಿರಂಗವಾಗಿ ಹೇಳಲಿ ಎಂದು ಟಾಂಗ್ ನೀಡಿದರು.