ಆಧಾರ್ ಕಾರ್ಡ್ ವಿತರಿಸುವ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಎಐ) ಜನರಿಗೆ ಪಿವಿಸಿ ಆಧಾರ್ ಕಾರ್ಡ್ ಗಳನ್ನು ಆನ್ ಲೈನ್ ನಲ್ಲಿ ಕೇವಲ 50ರೂ. ಶುಲ್ಕಕ್ಕೆ ಲಭ್ಯವಾಗುವಂತೆ ಮಾಡಿದೆ. ಪಿವಿಸಿ ಆಧಾರ್ ಕಾರ್ಡ್ ಗಳನ್ನು ಪಾಲಿವಿನೈಲ್ ಕ್ಲೋರೈಡ್ ಬಳಸಿ ಮಾಡಲಾಗಿದೆ.
ಇದು ಸುರಕ್ಷಿತ ಕ್ಯುಆರ್ ಕೋಡ್, ಹೊಲೊಗ್ರಾಮ್, ಹೆಸರು, ಫೋಟೋ, ಜನ್ಮದಿನಾಂಕ ಹಾಗೂ ಇತರ ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ. ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡುವ ಪ್ರಕ್ರಿಯೆ ಕೂಡ ಸರಳವಾಗಿದ್ದು, ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇದನ್ನು ಪೂರ್ಣಗೊಳಿಸಬಹುದು.
ಪಿವಿಸಿ ಕಾರ್ಡ್ (PVC card) ಆರ್ಡರ್ ಮಾಡೋದು ಹೇಗೆ?
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪಿವಿಸಿ ಕಾರ್ಡ್ ಆರ್ಡರ್ ಮಾಡಬಹುದು.
*ಯುಐಡಿಎಐ ಅಧಿಕೃತ ವೆಬ್ ಸೈಟ್ https://uidai.gov.in/ ಭೇಟಿ ನೀಡಿ.
*ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಆಯ್ಕೆ ಮಾಡಿ.
*12 ಅಂಕೆಗಳ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ನಮೂದಿಸಿ.
*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ವೆಬ್ ಸೈಟ್ ನಲ್ಲಿ ನಮೂದಿಸಿ.
*ಈಗ ಪಿವಿಸಿ ಆಧಾರ್ ಕಾರ್ಡ್ ಪ್ರಿವ್ಯೂವ್ ಕಾಣಿಸುತ್ತದೆ. ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ 50ರೂ. ಪಾವತಿಸಬೇಕು.
*ಸ್ಪೀಡ್ ಪೋಸ್ಟ್ (Speed post) ಮೂಲಕ ಅರ್ಜಿದಾರರ ಮನೆಗೆ ಪಿವಿಸಿ ಕಾರ್ಡ್ ಡೆಲಿವರಿ ಮಾಡಲಾಗುತ್ತದೆ.
ಒಂದು ವೇಳೆ ಯಾವುದೇ ವ್ಯಕ್ತಿ ಪಿವಿಸಿ ಆಧಾರ್ ಕಾರ್ಡ್ ಗೆ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ರೆ ಆತ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ 50ರೂ. ಶುಲ್ಕ ಪಾವತಿಸಬೇಕು. 5ರಿಂದ 6 ದಿನಗಳೊಳಗೆ ಕಾರ್ಡ್ ಅನ್ನು ಅವರ ಮನೆ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಆಧಾರ್ ಕಾರ್ಡ್ ಇಲ್ಲದೆ ವ್ಯಕ್ತಿಗಳು ವಿವಿಧ ಸರ್ಕಾರಿ ಯೋಜನೆಗಳು, ಶಾಲೆ ಅಥವಾ ಕಾಲೇಜು ಪ್ರವೇಶ, ಪ್ರವಾಸ ಹಾಗೂ ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಅನೇಕ ಹಣಕಾಸಿನ ವಹಿವಾಟುಗಳನ್ನು ನಡೆಸಲು ಸಾಧ್ಯವಾಗೋದಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಜೊತೆಗೆ ಅದು ಕಳೆದು ಹೋದ ಸಂದರ್ಭದಲ್ಲಿ ಪಿವಿಸಿ ಆಧಾರ್ ಕಾರ್ಡ್ ಗೆ ಆರ್ಡರ್ ಮಾಡೋದು ಉತ್ತಮ.
ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ದೇಶದ ನಾಗರಿಕರಿಗೆ ನೀಡುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ.