ಕೋಲಾರ : ಸಾಲ ಮಾಡುವಾಗ ಅನಗತ್ಯವಾಗಿ, ಸಾಲ ಸಿಗುವುದೆಂಬ ಆಸೆಯ ಮೇಲೆ ಸಾಲ ಪಡೆಯುವುದು ಸಾರ್ವಜನಿಕ ಆರ್ಥಿಕ ಜೀವನಕ್ಕೆ ಮಾರಕ. ಬದಲಾಗಿ ಅವಶ್ಯಕತೆಗೆ ಅನುಗುಣವಾಗಿ ವಿವೇಚನೆಯಿಂದ ಸಾಲ ಪಡೆದು ನಿಗದಿತ ಅವಧಿಯೊಳಗೆ ಕಂತುಗಳನ್ನು ತುಂಬಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಅವರು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಮಾನ್ಯ ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಖಾಸಗಿ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಗಳ , ಖಾತೆದಾರರ ಹಾಗೂ ಸಾಲಗಾರರ ವಿವರಗಳನ್ನು ಕೂಡಲೇ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಬೇಕು.
ಹಣಕಾಸು ಚಟುವಟಿಕೆಗಳು ನ್ಯಾಯಯುತವಾಗಿದ್ದಲ್ಲಿ ಸರ್ಕಾರವು ಯಾವುದೇ ವ್ಯವಹಾರ ನಡೆಸಲು ಅಡ್ಡಿ ಪಡಿಸುವುದಿಲ್ಲ. ಹಣಕಾಸು ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯವ್ಯಾಪ್ತಿಯಲ್ಲೇ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜನರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಸಂದರ್ಭ ಉದ್ಭವಿಸಬಾರದು. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಬೇಕು ಎಂದರು.