ದೆಹಲಿ: ಭಾರತದಲ್ಲಿರುವ ಜರ್ಮನ್ ರಾಯಭಾರಿ (German Envoy) ಫಿಲಿಪ್ ಅಕರ್ಮನ್ (Philipp Ackermann) ಅವರು ಹೊಸ ಇವಿ ಕಾರನ್ನು ಖರೀದಿಸಿ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಭಾರತೀಯ ಸಂಸ್ಕೃತಿಯ (Indian Culture) ಮೇಲಿರುವ ಒಲವನ್ನು ತೋರಿಸಿದ್ದಾರೆ.
ಹೊಸ ವಾಹನವನ್ನು ಖರೀದಿಸಿದ ಸಂದರ್ಭ ಅದಕ್ಕೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ತೆಂಗಿನ ಕಾಯಿ ಒಡೆಯುವುದು ಭಾರತೀಯ ಸಂಸ್ಕೃತಿ. ಈ ರೀತಿ ಮಾಡುವುದರಿಂದ ದುಷ್ಟಶಕ್ತಿಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಫಿಲಿಪ್ ಅಕರ್ಮನ್ ಅವರು ಬಿಎಂಡಬ್ಲ್ಯೂ i7 ಇವಿ (BMW i7 EV) ಕಾರನ್ನು ಖರೀದಿಸಿದ್ದು, ಅದಕ್ಕೆ ಮೆಣಸಿನಕಾಯಿ, ನಿಂಬೆಹಣ್ಣು ಕಟ್ಟಿ ತೆಂಗಿನ ಕಾಯಿ ಒಡೆದು ಪೂಜೆ ಮಾಡಿದ್ದಾರೆ. ಜರ್ಮನ್ ರಾಯಭಾರಿ ಭಾರತೀಯ ಸಂಸ್ಕೃತಿಯನ್ನು ತೋರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಳಿಗಾಲದಲ್ಲಿ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ನಾವು ಕೊಡುಗೆಯನ್ನು ನೀಡಬೇಕು. ಈ ಸಲುವಾಗಿ ನಾನು ಇವಿ ಕಾರನ್ನು ಖರೀದಿಸಿದೆ. ಪರಿಸರ ಕಾಳಜಿಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.