ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾನ್ಸರ್ ಪ್ರೀ ಆಗಿದ್ದಾರೆ. ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಸದ್ಯ ಚೇತರಿಸಿಕೊಳ್ಳುತ್ತಿದ್ದು ಸದ್ಯದಲ್ಲೇ ಮತ್ತೆ ನಟನೆಗೆ ಎಂಟ್ರಿಕೊಡೋದಾಗಿ ಹೇಳಿದ್ದಾರೆ. ಅಂದ ಹಾಗೆ ಶಿವರಾಜ್ ಕುಮಾರ್ ಗೆ ಕ್ಯಾನ್ಸರ್ ಇದೆ ಎಂಬ ವಿಷಯವನ್ನ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಕಷ್ಟು ಸಮಯ ಶಿವರಾಜ್ ಕುಮಾರ್ ಅವರಿಗೆ ಹೇಳಿಯೇ ಇರಲಿಲ್ಲವಂತೆ.
ಖಾಸಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಗೀತಾ ಹಾಗೂ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ‘ಕಳೆದ ಮಾರ್ಚ್ ತಿಂಗಳಲ್ಲಿ ಕೊಲ್ಲೂರಿಗೆ ತೆರಳಿದ್ದೆವು. ಮೂತ್ರದ ಬಣ್ಣ ಬದಲಾಗಿತ್ತು. ಮರುದಿನವೇ ಟೆಸ್ಟ್ ಮಾಡಿಸಿದೆವು. ಯಂಗ್ ಡಾಕ್ಟರ್ ಒಬ್ಬರು ಬಂದು ಮಾನಿಟರ್ ನೋಡಿದರು. ಬೇಗ ಟ್ರೀಟ್ ಮಾಡಿಸಿಕೊಳ್ಳಿ ಎಂದು ಹೇಳಿ ಹೊರಟು ಹೋದರು. ವೈದ್ಯರ ಕಣ್ಣಲ್ಲೂ ನೀರಿತ್ತು’ ಎಂದಿದ್ದಾರೆ ಗೀತಾ.
‘ನನ್ನ ಅಳಿಯ ದಿಲೀಪ್ ಬಂದು ವರದಿ ನೋಡಿ ಹೀಗಿದೆ ಎಂದ. ಮನೆಯಲ್ಲಿ ಕೆಲವು ಟ್ರೀಟ್ಮೆಂಟ್ ಮಾಡಲಾಯಿತು. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಶಿವರಾಜ್ಕುಮಾರ್ಗೆ ಕ್ಯಾನ್ಸರ್ ಇರುವ ವಿಚಾರ ಹೇಳಿರಲಿಲ್ಲ. ಕುಟುಂಬದ ಕೆಲವರಿಗೆ ಮಾತ್ರ ವಿಚಾರ ಗೊತ್ತಿತ್ತು. ಕ್ಯಾನ್ಸರ್ ಇದೆ ಎಂಬ ವಿಚಾರ ಹೇಳಿದರೆ ಅವರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ, ಹೇಳಿರಲಿಲ್ಲ. ಬೇರೆ ಕಾರಣ ಹೇಳಿ ಎರಡು ಸರ್ಜರಿ ಮಾಡಲಾಯಿತು’ ಎಂದಿದ್ದಾರೆ ಗೀತಾ ಶಿವರಾಜ್ ಕುಮಾರ್.
‘ಮೊದಲೆರಡು ಆಪರೇಷನ್ ಮಾಡಿದ ಬಳಿಕದ ರಿಪೋರ್ಟ್ ನೋಡಿದಾಗ ಅದರಲ್ಲಿ ಕ್ಯಾನ್ಸರ್ ಅಂಶ ಕಾಣಿಸಲೇ ಇಲ್ಲ. ಆದರೆ, ಆ ಬಳಿಕ ಚೆಕ್ ಮಾಡಿದಾಗ ಮತ್ತೆ ಕ್ಯಾನ್ಸರ್ ಕಣ ವೇಗವಾಗಿ ಹರಡುತ್ತಿತ್ತು. ಆ ಬಳಿಕ ಹೇಳಬೇಕಾಯಿತು’ ಎಂದಿದ್ದಾರೆ ಗೀತಾ ಶಿವರಾಜ್ಕುಮಾರ್.
‘ಮೊದಲು ಈ ವಿಚಾರ ಗೊತ್ತಾದಾಗ ನಾನು ಬ್ಲ್ಯಾಂಕ್ ಆಗೋದೆ. ಅವರಿಗೆ ಹೀಗೆ ಆಗಬಾರದಿತ್ತು ಎನಿಸಿತು. ಈ ವಿಚಾರ ಶಿವರಾಜ್ಕುಮಾರ್ಗೆ ಗೊತ್ತಾದಾಗ ಸಾಕಷ್ಟು ಅಪ್ಸೆಟ್ ಆದರು. ಇದಕ್ಕೆಲ್ಲ ಟ್ರೀಟ್ಮೆಂಟ್ ಇದೆ ಎಂದು ಧೈರ್ಯ ತುಂಬಿದೆವು’ ಎಂದು ಗೀತಾ ಹೇಳಿದ್ದಾರೆ.