ಬಾಂಗ್ಲಾದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಎರಡನೇ ಟೆಸ್ಟ್ ಪಂದ್ಯದ ಗೆಲುವಿನ ಶ್ರೇಯ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸಲ್ಲಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ಆ ಮೂಲಕ ‘ಗ್ಯಾಂಬಾಲ್’ ಎಂದು ಕರೆದು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಹೆಸರನ್ನು ಉಲ್ಲೇಖಿಸಿದ್ದವರನ್ನು ಟೀಕಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಆಕ್ರಮಣಕಾರಿ ಆಟದಿಂದ ಭಾರತ ತಂಡ ಕಠಿಣವಾಗಿದ್ದ ಕಾನ್ಪುರ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು. ಟಿ20 ಮಾದರಿಯ ಬ್ಯಾಟಿಂಗ್ನೊಂದಿಗೆ ಬಾಂಗ್ಲಾದೇಶ ಬೌಲರ್ಗಳ ಮೇಲೆ ಭಾರತ ತಂಡದ ಬ್ಯಾಟ್ಸ್ಮನ್ಗಳು ದಾಳಿ ನಡೆಸಿದ್ದರು. ಎರಡೂವರೆ ದಿನದ ಆಟ ಮಳೆಯಿಂದ ನಲುಗಿ ಹೋಗಿದ್ದರೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿತ್ತು.
‘ಗ್ಯಾಂಬಾಲ್’ ಎಂಬ ಪದ ಚಾಲ್ತಿಗೆ ಬಂದಿತ್ತು ಮತ್ತು ಇದು ತಮ್ಮದು ಎಂದು ಹಿರಿಯ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಒಪ್ಪಿಕೊಂಡಿದ್ದರು. ಆದರೆ ಇದು ಗ್ಯಾಂಬಾಲ್ ಅಲ್ಲ ಆಕ್ರಮಣಕಾರಿ ಆಟವಾಡಿದ ಕೀರ್ತಿ ರೋಹಿತ್ ಶರ್ಮಾಗೆ ಸಲ್ಲುತ್ತದೆ ಎಂದು ಮಾಜಿ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಸ್ಪಷ್ಟಪಡಿಸಿದ್ದಾರೆ. ಕಾನ್ಪುರ್ ಟೆಸ್ಟ್ ಗೆಲುವಿನ ಶ್ರೇಯ ಹೆಡ್ ಕೋಚ್ ಗೌತಮ್ ಗಂಭೀರ್ಗೆ ಅಲ್ಲ, ನಾಯಕ ರೋಹಿತ್ ಶರ್ಮಾಗೆ ಸಲ್ಲಬೇಕೆಂದು ಬ್ಯಾಟಿಂಗ್ ದಿಗ್ಗಜ ತಿಳಿಸಿದ್ದಾರೆ.
ಬೆನ್ ಸ್ಟೋಕ್ಸ್ ಮತ್ತು ಮೆಕಲಮ್ ಸಾರಥ್ಯದಲ್ಲಿ ಇಂಗ್ಲೆಂಡ್ ತಂಡದ ಆಟದ ಶೈಲಿಯೇ ಬದಲಾಗಿದೆ. ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಹಲವು ವರ್ಷಗಳಿಂದ ಆಕ್ರಮಣಕಾರಿಯಾಗಿ ನಡೆಸುತ್ತಿದ್ದಾರೆ. ಅವರು ಆಕ್ರಮಣಕಾರಿಯಾಗಿ ಆಡಿದ್ದಾರೆ ಮತ್ತು ಇತರ ಆಟಗಾರರನ್ನು ಪ್ರೋತ್ಸಾಹಿಸಿದ್ದಾರೆ. ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡು ಕೆಲವೇ ತಿಂಗಳುಗಳಾಗಿವೆ. ಆದರೆ, ಟೀಮ್ ಇಂಡಿಯಾದ ಪ್ರದರ್ಶನವನ್ನೇ ಕೋಚ್ ಬದಲಾಯಿಸಿದ್ದಾರೆ ಎಂದು ಕೆಲವರು ಗೌತಮ್ ಗಂಭೀರ್ ಅವರನ್ನು ಹೈಲೈಟ್ ಮಾಡುತ್ತಿದ್ದಾರೆ,” ಎಂದು ಬ್ಯಾಟಿಂಗ್ ದಿಗ್ಗಜ ದೂರಿದ್ದಾರೆ.