ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ರೋಚಕ ಘಟ ತಲುಪುತ್ತಿದೆ. ಈಗಾಗಲೇ 90 ದಿನಗಳ ಆಟ ಮುಗಿಸಿರುವ ದೊಡ್ಮನೆ ಸದ್ಯದಲ್ಲೇ ಫಿನಾಲೆಗೆ ಎದುರು ನೋಡುತ್ತಿದೆ. ಈ ಮಧ್ಯೆ ಹೊಸ ವರ್ಷದ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಸ್ಪರ್ಧಿಗಳ ಕುಟುಂಬದವರು ಬಿಗ್ ಬಾಸ್ ಮನೆಯೊಳಗೆ ಆಗಮಿಸಿದ್ದು ಅವರ ಜೊತೆ ಸ್ಪರ್ಧಿಗಳು ಕೆಲ ಸಮಯ ಕಳೆದಿದ್ದಾರೆ.ಅಂತೆಯೇ ದೊಡ್ಮನೆಯಲ್ಲಿ ಗೌತಮಿ ಅವರ ಮೂವರು ಮಕ್ಕಳನ್ನು ತೋರಿಸಲಾಗಿದ್ದು ಮಕ್ಕಳನ್ನು ನೋಡುತ್ತಿದ್ದಂತೆ ಗೌತಮಿ ಕಣ್ಣಿರು ಹಾಕಿದ್ದಾರೆ.
ಗೌತಮಿ ಹಾಗೂ ಅಭಿಷೇಕ್ ವಿವಾಹವಾಗಿದ್ದು ಬಿಗ್ ಬಾಸ್ ಮನೆಯಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಇವರು ಇನ್ನೂ ಪಾಲಕರಾಗಿಲ್ಲ. ಆದರೆ, ಗೌತಮಿ ಮೂರು ಶ್ವಾನಗಳನ್ನು ಸಾಕಿದ್ದಾರೆ. ಅವುಗಳ ಹೆಸರು ಕುಲ್ಫಿ, ಕಾಫಿ, ಹ್ಯಾಪಿ. ಮೂರು ಶ್ವಾನಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರನ್ನು ಗೌತಮಿ ಎಂದಿಗೂ ನಾಯಿಗಳಂತೆ ಪರಿಗಣಿಸಿಲ್ಲ, ಅವುಗಳನ್ನು ಮಕ್ಕಳು ಎಂದೇ ಭಾವಿಸಿದ್ದಾರೆ.
ಈಗ ಬಿಗ್ ಬಾಸ್ ಮನೆಯಲ್ಲಿ ವಿಡಿಯೋ ಒಂದನ್ನು ಪ್ಲೇ ಮಾಡಲಾಗಿದೆ. ಈ ವಿಡಿಯೋದಲ್ಲಿ ಮೂರು ಶ್ವಾನಗಳು ಏನು ಮಾಡುತ್ತಿವೆ ಎಂಬುದನ್ನು ತೋರಿಸಲಾಗಿದೆ. ‘ಗೌತು ಬಂದ್ಲಾ ನೋಡು’ ಎಂದು ಅಭಿಷೇಕ್ ಹೇಳಿದಾಗ ಮೂರು ಶ್ವಾನಗಳು ಹೊರಗೆ ಹೋಗಿ ಬರೋದು ವಿಡಿಯೋದಲ್ಲಿ ಇದೆ. ಅಲ್ಲದೆ, ಬಿಗ್ ಬಾಸ್ ಪ್ರಸಾರ ಕಾಣುವಾಗ ಮೂರೂ ಶ್ವಾನಗಳು ಟಿವಿ ಎದುರು ಕುಳಿತು ಗೌತಮಿ ಅವರನ್ನು ವೀಕ್ಷಿಸಿದ್ದಾರೆ.
ಈ ವಿಡಿಯೋ ಬರುತ್ತಿದ್ದಂತೆ ಗೌತಮಿ ಅವರು ಕಣ್ಣಿರು ಹಾಕಿದರು. ‘ಈ ಮೂವರು ನನ್ನ ಮಕ್ಕಳು’ ಎಂದು ಹೇಳಿದರು. ಬಿಗ್ ಬಾಸ್ ಎಪಿಸೋಡ್ನಲ್ಲಿ ಈ ವಿಚಾರ ಹೈಲೈಟ್ ಆಗಿದೆ. ಆ ಬಳಿಕ ಗೌತಮಿ ಅವರ ಪತಿ ಅಭಿಷೇಕ್ ಕೂಡ ದೊಡ್ಮನೆಗೆ ಬಂದಿದ್ದು ಅವರನ್ನು ನೋಡುತ್ತಿದ್ದಂತೆ ಗೌತಮಿ ಖುಷಿಯಿಂದ ಕುಣಿದಾಡಿದ್ದಾರೆ.