ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತನ್ನ ನಾಯಕತ್ವದಲ್ಲಿ ಭಾರತ ತಂಡದಲ್ಲಿ ಗೆಲ್ಲುವ ಮನಸ್ಥಿತಿ ಹಾಗೂ ಸಂಸ್ಕೃತಿಯನ್ನು ರೂಪಿಸಿದ ವಿರಾಟ್ ಕೊಹ್ಲಿಗೆ ವಿದೇಶಿ ಟೆಸ್ಟ್ ಸರಣಿಗಳ ಜಯದ ಶ್ರೇಯ ಸಲ್ಲಬೇಕೆಂದು ಗಂಭೀರ್ ಹೇಳಿದ್ದಾರೆ. 2017ರಲ್ಲಿ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕತ್ವ ಸ್ವೀಕರಿಸಿದ ಬಳಿಕ ವಿರಾಟ್ ಕೊಹ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ 2018-19ರ ಸಾಲಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಮೊಟ್ಟ ಮೊದಲ ಟೆಸ್ಟ್ ಸರಣಿ ಜಯ ಇದಾಗಿತ್ತು. ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ವಿದೇಶಿ ಸರೆಣಿಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.
“25ನೇ ವಯಸ್ಸಿನಲ್ಲಿಯೇ ನಾಯಕತ್ವದ ಹೊಣೆ ನೀಡಿದ ಬಳಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ಭಾರತ ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿ ಪಡೆದಿದ್ದರು. ಕೊಹ್ಲಿಯ ನಾಯಕತ್ವದಲ್ಲಿ ಅದ್ಭುತ ಬೌಲಿಂಗ್ ವಿಭಾಗವನ್ನು ಕಟ್ಟಲಾಗಿತ್ತು. ಎಲ್ಲಾ 20 ವಿಕೆಟ್ಗಳನ್ನು ಪಡೆಯುವ ಮೂಲಕ ಹಲವು ಟೆಸ್ಟ್ ಪಂದ್ಯಗಳನ್ನು ಗೆಲ್ಲಲಾಗಿದೆ. ಈಗಲೂ ಅತ್ಯುತ್ತಮ ಬೌಲಿಂಗ್ ಲೈನ್ ಇಲ್ಲದೆ ನೀವು ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ,” ಎಂದು ಬಿಸಿಸಿಐ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಗೌತಮ್ ಗಂಭೀರ್ ತಿಳಿಸಿದ್ದಾರೆ.