ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಆಡಿ ಚೊಚ್ಚಲ ಶತಕ ಬಾರಿಸಿದರಲ್ಲದೆ, ಬೌಲಿಂಗ್ನಲ್ಲಿ ಎರಡು ಪ್ರಮುಖ ವಿಕೆಟ್ ಪಡೆದು, ಫೀಲ್ಡಿಂಗ್ನಲ್ಲೂ ಕ್ಯಾಚ್ ತೆಗೆದುಕೊಂಡು ಅಮೋಘ ಪ್ರದರ್ಶನ ನೀಡಿದ ಅನುಭವಿ ಆಟಗಾರ ಸುನೀಲ್ ನರೇನ್ ಅವರನ್ನು ತಂಡದ ಮೆಂಟರ್ ಗೌತಮ್ ಗಂಭೀರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಸ್ಟಾರ್ ಆಲ್ರೌಂಡರ್ ಶ್ರೇಷ್ಠ ಆಟವಾಡಿದರೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ತವರಿನ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 2 ವಿಕೆಟ್ ಅಂತರದ ವೀರೋಚಿತ ಸೋಲುಂಡಿತು. ಇದರ ಬೆನ್ನಲ್ಲೇ ಗಂಭೀರ್ ತಮ್ಮ ಟ್ವಿಟರ್ ಗೋಡೆಯ ಮೇಲೆ ಒಂದೇ ಒಂದು ಸಾಲಿನಲ್ಲಿ ಸ್ಟಾರ್ ಆಟಗಾರನ ಮಹತ್ವದ ಕೊಡುಗೆಯನ್ನು ಕೊಂಡಾಡಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಕೇವಲ 49 ಎಸೆತಗಳಲ್ಲಿ ಸುನೀಲ್ ನರೇನ್ ಮನಮೋಹಕ ಶತಕ ಬಾರಿಸಿದರು. ಇದು ಅವರ ಐಪಿಎಲ್ ವೃತ್ತಿಬದುಕಿನ ಮೊದಲ ಶತಕವಾಗಿದೆ. ಈ ಮೂಲಕ ಐಪಿಎಲ್ 2024 ಟೂರ್ನಿಯ ಆರೆಂಜ್ ಕ್ಯಾಪ್ ರೇಸ್ನಲ್ಲಿ ಸುನೀಲ್ 4ನೇ ಸ್ಥಾನಕ್ಕೇರಿದ್ದಾರೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಅಂದಹಾಗೆ ಟಿ20 ಕ್ರಿಕೆಟ್ನಲ್ಲಿ ಸುನೀಲ್ ನರೇನ್ ಅವರನ್ನು ಆರಂಭಿಕ ಬ್ಯಾಟರ್ ಆಗಿ ಬಳಸಿಕೊಂಡ ಹೆಗ್ಗಳಿಕೆ ಗೌತಮ್ ಗಂಭೀರ್ ಅವರದ್ದಾಗಿದೆ. ಸ್ಪಿನ್ ಮಾಂತ್ರಿಕನ ಒಳಗೆ ಅಡಗಿದ್ದ ಸ್ಪೋಟಕ ಬ್ಯಾಟರ್ನ ಗುರುತಿಸಿ ಹೊರತಂದದ್ದು ಗೌತಮ್ ಗಂಭೀರ್ ಎಂಬುದು ವಿಶೇಷ. ಹೀಗಾಗಿ ತಾವು ಗುರುತಿಸಿದ ಪ್ರತಿಭಾವಂತ ಆಟಗಾರನ ಅಮೋಘ ಆಟವನ್ನು ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಗಂಭೀರ್ ಗುಣಗಾನ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸುನೀಲ್ ನರೇನ್ ಎದುರಿಸಿದ 56 ಎಸೆತಗಳಲ್ಲಿ 109 ರನ್ ಸಿಡಿಸಿದರು.
ಪರಿಣಾಮ ಕೆಕೆಆರ್ ತಂಡ 223 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಆದರೆ, ಜೋಸ್ ಬಟ್ಲರ್ ಅವರ ಅಜೇಯ ಶತಕದ ಬಲದಿಂದ ರಾಯಲ್ಸ್ ತಂಡ ಇನಿಂಗ್ಸ್ನ ಕಡೇ ಎಸೆತದಲ್ಲಿ ಕೆಕೆಆರ್ ಮುಷ್ಠಿಯಿಂದ ಗೆಲುವನ್ನು ಕಸಿದುಕೊಂಡಿತು. ಹೀಗಾಗಿ ಪಂದ್ಯದಲ್ಲಿ ಸನೀಲ್ ನರೇನ್ ಅವರ ಆಲ್ರೌಂಡ್ ಆಟ ವರ್ಥವಾದಂತ್ತಾಯಿತು. “ಹಿಂದೆ, ಈಗ ಹಾಗೂ ಎಂದೆಂದಿಗೂ ಈತನೊಬ್ಬನ್ನೇ,” ಎಂದು ಗೌತಮ್ ಗಂಭೀರ್ ತಮ್ಮ ಟ್ವಿಟರ್ ಗೋಡೆಯ ಮೇಲೆ ಬರೆದುಕೊಳ್ಳುವ ಮೂಲಕ ವೆಸ್ಟ್ ಇಂಡೀಸ್ ಆಟಗಾರನ ಮೇಲೆ ತಾವು ಹೊಂದಿರುವ ಅಪಾರ ಅಭಿಮಾನವನ್ನು ಹೊರಹಾಕಿದ್ದಾರೆ.