ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮುಂಗೋಪದ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಡೆಲ್ಲಿ ಕ್ರಿಕೆಟ್ ತಂಡದಲ್ಲಿ ಹಲವು ವರ್ಷಗಳ ಕಾಲ ಗೌತಮ್ ಗಂಭೀರ್ ಜೊತೆಗೆ ಡ್ರೆಸಿಂಗ್ ರೂಮ್ ಹಂಚಿಕೊಂಡ ಅನುಭವ ಹೊಂದಿರುವ ಆಕಾಶ್ ಚೋಪ್ರಾ, ಆನ್ಫೀಲ್ಡ್ನಲ್ಲಿ ಗೌತಮ್ ಗಂಭೀರ್ ಎಷ್ಟೇ ಆಕ್ರಮಣಕಾರಿ ಸ್ವಭಾವ ತೋರಿದರೂ ಆಫ್ದಿ ಫೀಲ್ಡ್ನಲ್ಲಿ ಅಷ್ಟೇ ಉತ್ತಮ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಇದೀಗ ಭಾರತ ತಂಡ ಸಾಲು ಸಾಲು ಟೆಸ್ಟ್ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಪ್ರವಾಸಿ ಬಾಂಗ್ಲಾದೇಶ ಎದುರು 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಸೆಪ್ಟೆಂಬರ್ 19ರಂದು ಪ್ರಥಮ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಅಂದಹಾಗೆ ಗೌತಮ್ ಗಂಭೀರ್ ಅವರ ಕೋಚಿಂಗ್ಗೆ ಬಹುದೊಡ್ಡ ಸವಾಲು ಎಂದರೆ, ಇದೇ ವರ್ಷ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ. ನವೆಂಬರ್ನಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಬಾರ್ಡರ್ ಗವಾಸ್ಕರ್ ಟ್ರೋಫಿ ಸಲುವಾಗಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ ಈ ಬಾರಿ ಹ್ಯಾಟ್ರಿಕ್ ಸಾಧನೆಯನ್ನು ಎದುರು ನೋಡುತ್ತಿದೆ.
ಈ ಕುರಿತಾಗಿ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಅತ್ಯಂತ ಆಕ್ರಮಣಕಾರಿ ಆಟವಾಡುವ ಸ್ವಭಾವದವದಾರ ಗೌತಮ್ ಗಂಭೀರ್ ತಂಡಕ್ಕೆ ಯಶಸ್ಸು ತಂದುಕೊಡಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದಾರೆ ಎಂದಿದ್ದಾರೆ.