ಚಾಮರಾಜನಗರ: ಕೇರಳಿಗರು ತಮ್ಮ ರಾಜ್ಯದಿಂದ ನಾನಾ ರೀತೀಯ ತ್ಯಾಜ್ಯವನ್ನು ಗುಂಡ್ಲುಪೇಟೆ ತಾಲೂಕಿನ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುತ್ತಿದ್ದು, ಜಿಲ್ಲಾಡಳಿತ ಮೌನವಹಿಸಿದೆ. ಹೀಗೆ ನಿತ್ಯ ಇಲ್ಲಿಗೆ ಬಂದು ತ್ಯಾಜ್ಯ ಸುರಿದು ಹೋಗುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ರೋಗರುಜಿನಗಳು ಹರಡುವ ಆತಂಕ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಕೇರಳದಿಂದ ಮೆಡಿಕಲ್ ವೇಸ್ಟ್, ಚಪ್ಪಲಿ, ಮಾಂಸ, ಕೊಳೆತ ತರಕಾರಿ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತಂದು ಗಡಿಭಾಗದ ನಿರ್ಜನ ಪ್ರದೇಶಗಳಲ್ಲಿ ಸುರಿದು ಹೋಗುವುದು ಅಥವಾ ಗುಂಡ್ಲುಪೇಟೆ ಮೂಲಕ ಬೇರೆ ಜಿಲ್ಲೆಗಳಿಗೆ ಸಾಗಣೆ ಮಾಡುವುದು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕ ಗಡಿಭಾಗದ ಚೆಕ್ಪೋಸ್ಟ್ನಲ್ಲಿ ಯಾವುದೇ ತಪಾಸಣೆ ನಡೆಯದೆ ಕೇವಲ ಗ್ರೀನ್ ಟ್ಯಾಕ್ಸ್ ವಸೂಲಿಗಷ್ಟೇ ಸೀಮಿತವಾಗಿದೆ.
Driving License ಕಳೆದು ಹೋಗಿದ್ಯಾ.? ಹಾಗಿದ್ರೆ ಮರಳಿ ಪಡೆಯಲು ಹೀಗೆ ಮಾಡಿ ಸಾಕು
ನೆರೆಯ ಕೇರಳಿಗರು ಎಗ್ಗಿಲ್ಲದೇ ಚೆಕ್ಪೋಸ್ಟ್ ದಾಟಿ ಲಾರಿ ಮತ್ತು ಟೆಂಪೋಗಳಲ್ಲಿ ಕರ್ನಾಟಕಕ್ಕೆ ಕಸ ಸಾಗಣೆ ಮಾಡುತ್ತಿದ್ದಾರೆ. ಚೆಕ್ಪೋಸ್ಟ್ನಲ್ಲಿರುವ ಪೊಲೀಸ್ ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವು ಇದೆ.
ಇನ್ನೂ ಕೇರಳದಿಂದ ಕರ್ನಾಟಕಕ್ಕೆ ಕಸ ನಿರಂತರವಾಗಿ ಸಾಗಣೆಯಾಗುತ್ತಿದ್ದರೂ ಕೂಡ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇದರಿಂದ ಬೇಸತ್ತ ಕನ್ನಡಪರ ಸಂಘಟನೆಗಳು ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದ 5 ಲಾರಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೇರಳದ ಐವರು ಲಾರಿ ಚಾಲಕರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.