ಯಾರೂ ಸಲೀಸಾಗಿ ಮುಟ್ಟಲಾಗದ ಕಥಕ್ಕೆ ದೃಶರೂಪ ಕೊಟ್ಟು ಗೆಲುವು ಕಂಡವರು ನಿರ್ದೇಶಕಿ ರೂಪಾ ರಾವ್. ಈ ಹಿಂದೆ `ಗಂಟುಮೂಟೆ’ ಎಂಬ ಭಿನ್ನ ಬಗೆಯ ಚಿತ್ರವನ್ನು ರೂಪಾ ರಾವ್ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿರಳವಾಗಿರುವ ನಿರ್ದೇಶಕಿಯರ ಸಾಲಿನಲ್ಲಿ ವಿಶಿಷ್ಟವಾದ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಹಭೆಯಾಡುತ್ತಿದ್ದಾಗಲೇ, ಏಕಾಏಕಿ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ರೂಪಾ ರಾವ್ ನಿರ್ದೇಶನಕ್ಕೆ ಮರಳಿದ್ದಾರೆ. ಆ ಸಿನಿಮಾಕ್ಕೆ `ಗೋಚರ’ ಎಂಬ ಶೀರ್ಷಿಕೆ ನಿಗಧಿಯಾಗಿದೆ!
ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು. ಈ ಕಾರಣದಿಂದಲೇ ರೂಪಾ ಗಂಟುಮೂಟೆಯ ಸೀಕ್ವೆಲ್ ಕೈಗೆತ್ತಿಕೊಳ್ಳುವ ನಿರೀಕ್ಷೆಯೂ ಇತ್ತು. ಇದೀಗ ಗೋಚರ ಘೋಷಣೆಯಾದ ಬೆನ್ನಿಗೇ ಇದು ಗಂಟುಮೂಟೆಯ ಮುಂದುವರೆದ ಭಾಗವಾ ಅಂತೊಂದು ಪ್ರಶ್ನೆ ಮೂಡಿದೆ. ಸದ್ಯಕ್ಕೆ ರೂಪಾ ರಾವ್ ಗೋಚರ ಎಂಬುದು ಗಂಟುಮೂಟೆಯ ನಂಟು ಕಳಚಿಕೊಂಡ ಚಿತ್ರ ಎಂಬಂತೆ ಪೋಸ್ಟರ್ ಮೂಲಕ ಸಂದೇಶ ರವಾನಿಸಿದ್ದಾರೆ.
ಹಾಗಾದರೆ, ಗೋಚರ ಚಿತ್ರ ಯಾವ ಬಗೆಯದ್ದೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಇದೊಂದು ಟ್ರಾವೆಲ್ ಮೂವಿ ಎಂಬ ಏಕಮಾತ್ರ ಸುಳಿವಷ್ಟೇ ಸದ್ಯ ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ಇದೆಲ್ಲ ಏನೇ ಇದ್ದರೂ ಗೋಚರ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿದೆ ಎಂಬಂಥಾ ಅಭಿಪ್ರಾಯಗಳು ಮೂಡಿಕೊಂಡಿವೆ. ನಿರ್ಮಾಪಕಿಯಾಗಿಯೂ ಭಿನ್ನ ಸಿನಿಮಾದ ಭಾಗವಾಗಿದ್ದ ರೂಪಾ ರಾವ್, ನಿರ್ದೇಶಕಿಯಾಗಿ ಬೆರಗಿನ ಕಥೆಯನ್ನೇ ಆಯ್ದುಕೊಂಡಿದ್ದಾರೆಂಬುದರಲ್ಲಿ ಸಂಶಯವೇನಿಲ್ಲ. ಗೋಚರದ ಬಗೆಗಿನ ಮಿಕ್ಕುಳಿದ ಮಾಹಿತಿಗಳು ಹಂತ ಹಂತವಾಗಿ ಗೋಚರಿಸುವ ಸಾಧ್ಯತೆಗಳಿವೆ.